ನ್ಯೂಯಾರ್ಕ್: ಚೀನಾದ ಟೆಲಿಕಾಂ ದೈತ್ಯ ಹುವಾಯ್ ವಿರುದ್ಧ ತೀವ್ರ ಟೀಕೆಗಳು ಅಮೆರಿಕದಲ್ಲಿ ಕಳೆದ ಕೆಲವು ತಿಂಗಳಿಂದ ಕೇಳಿಬರುತ್ತಿವೆ. 5 ಜಿ ಮೂಲಸೌಕರ್ಯದಲ್ಲಿ 'ವಿಶ್ವಾಸಾರ್ಹವಲ್ಲದ' ಚೀನಿ ಘಟಕಗಳಿಗೆ ಪ್ರತಿಯಾಗಿ ಸ್ವದೇಶಿ 5ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ರಿಲಯನ್ಸ್ ಜಿಯೋ ಟೆಂಪ್ಲೇಟ್ ಅನುಸರಿಸುವಂತೆ ವಿಶ್ವದಾದ್ಯಂತ ಇರುವ ಟೆಲಿಕಾಂ ಆಪರೇಟರ್‌ಗಳಿಗೆ ಅಮೆರಿಕ ಒತ್ತಾಯಿಸಿದೆ.
ರಿಲಯನ್ಸ್ ಜಿಯೋದಿಂದ ಕಲಿಯಬೇಕಾದ ಪಾಠವೆಂದರೆ 5ಜಿ ತಂತ್ರಜ್ಞಾನ ಎಂಬುದು ಅತೀಂದ್ರಿಯ ಏನೂ ಇಲ್ಲ. ಇದು 4ಜಿ ತಂತ್ರಜ್ಞಾನ ಹೊಂದಿರುವ ಒಂದೇ ರೀತಿಯ ಘಟಕಗಳನ್ನು ಹೊಂದಿದೆ. ಇದು ಮತ್ತೊಂದು ಹಂತಕ್ಕೆ ವಿಕಸನಗೊಂಡಿದೆ ಎಂದು ಅಮೆರಿಕದ ಉನ್ನತ ಸೈಬರ್ ರಾಜತಾಂತ್ರಿಕ ರಾಬರ್ಟ್ ಎಲ್. ಸ್ಟ್ರೇಯರ್ ಐಎಎನ್ಎಸ್ಗೆ ತಿಳಿಸಿದ್ದಾರೆ.
ಜುಲೈ 15 ರಂದು ನಡೆದ ರಿಲಯನ್ಸ್ನ 43ನೇ ಎಜಿಎಂನಲ್ಲಿ ಅಧ್ಯಕ್ಷ ಮುಖೇಶ್ ಅಂಬಾನಿ ಅವರು, ಜಿಯೋ 100 ಪ್ರತಿಶತ ಮೇಡ್-ಇನ್-ಇಂಡಿಯಾ 5 ಜಿ ತಂತ್ರಜ್ಞಾನ ಪರಿಚಯಿಸಲಿದೆ ಎಂದು ಘೋಷಿಸಿದ್ದರು. ಇದನ್ನು ಅಮೆರಿಕದ ಸ್ಟ್ರೇಯರ್ ಸ್ವಾಗತಿಸಿದ್ದಾರೆ.
ಸ್ಟ್ರೇಯರ್ ಅವರು ಸೈಬರ್ ಮತ್ತು ಅಂತಾರಾಷ್ಟ್ರೀಯ ಸಂವಹನ ಮತ್ತು ಮಾಹಿತಿ ನೀತಿಯ ಯುಎಸ್ ಉಪ ಸಹಾಯಕ ಕಾರ್ಯದರ್ಶಿ ಆಗಿದ್ದಾರೆ. ಅಂತಾರಾಷ್ಟ್ರೀಯ ಸೈಬರ್ ಸುರಕ್ಷತೆ, ಇಂಟರ್‌ನೆಟ್, ಡೇಟಾ ಮತ್ತು ಗೌಪ್ಯತೆ ನೀತಿ ಮತ್ತು ಅಮೆರಿಕದ ಪರವಾಗಿ ವಿದೇಶಿ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಾರೆ. 5ಜಿ ನೆಟ್‌ವರ್ಕ್‌ಗಳಿಗೆ ಹುವಾಯ್ ಹೊರತುಪಡಿಸಿ ಮಿತ್ರರಾಷ್ಟ್ರಗಳು ಮತ್ತು ಇತರ ದೇಶಗಳನ್ನು ಯುಎಸ್ ತಂಡಕ್ಕೆ ಸೇರಿಸುವುದರಲ್ಲಿ ಸ್ಟ್ರೇಯರ್ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ.
ಏರ್‌ಟೆಲ್, ವೊಡಾ- ಐಡಿಯಾ, ಬಿಎಸ್‌ಎನ್‌ಎಲ್ ನಂತಹ ಕಂಪನಿಗಳು ಚೀನಿ ಆಪರೇಟರ್ಗಳ ಮೇಲೆ ಅವಲಂಬನೆ ಆಗಿದ್ದಾರೆ ಏನು ಮಾಡಬೇಕೆಂದು ಕೇಳಿದಾಗ, 'ತಂತ್ರಜ್ಞಾನದ ಜೀವನ ಚಕ್ರ ಮತ್ತು ಸವಕಳಿ ಜೊತೆ ಸಾಗಬೇಕಿದೆ. ವಿಶ್ವಾಸಾರ್ಹವಲ್ಲದ ಮಾರಾಟಗಾರರಿಂದ ವಿಶ್ವಾಸಾರ್ಹ ಮಾರಾಟಗಾರರತ್ತ ವಲಸೆ ಹೋಗಬೇಕಿದೆ' ಎಂದು ಅವರು ಕರೆ ನೀಡಿದರು.