ಮುಂಬೈ: ಮಹಾರಾಷ್ಟ್ರದಲ್ಲಿನ ಬಿಜೆಪಿ ಸರ್ಕಾರ ಲಾತೂರ್ ಜಿಲ್ಲೆಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ಗೆ (ಬಿಎಚ್‌ಇಎಲ್) ಮೀಸಲಿರಿಸಿದ ಭೂಮಿಯನ್ನು ಯೋಗ ಗುರು ಬಾಬಾ ರಾಮದೇವರ ಪತಂಜಲಿಗೆ ಹಸ್ತಾಂತರಿಸಿದೆ.
400 ಎಕರೆ ಭೂಮಿಯನ್ನು ಮಾಜಿ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ ಮುಖ್ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ಗೆ (ಬಿಎಚ್‌ಇಎಲ್) ಬಂಡವಾಳ ಹೂಡಿಕೆಯ ಭಾಗವಾಗಿ ಮೀಸಲಿಟ್ಟಿದ್ದರು. ಈಗ ಈ ಭೂಮಿ ಪತಂಜಲಿ ಉತ್ಪನ್ನಗಳ ತಯಾರಿಕೆಗೆ ಹಸ್ತಾಂತರ ಆಗುತ್ತಿದೆ.
ಪತಂಜಲಿ ಗ್ರೂಪ್‌ನ ಪ್ರವರ್ತಕರು ಹಸ್ತಾಂತರಿಸಿದ ಭೂಮಿಯಲ್ಲಿ ಸೋಯಾಬೀನ್ ಸಂಸ್ಕರಣಾ ಘಟಕ ಆರಂಭಿಸುವ ಸಾಧ್ಯತೆ ಇದೆ. ಹಸ್ತಾಂತರದ ಜೊತೆಗೆ ಸ್ಟಾಂಪ್ ಡ್ಯೂಟಿ ಸಹ ಮನ್ನಾ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಯಾವ ರೀತಿಯ ಸಂಸ್ಕರಣ ಘಟಕ ಆರಂಭಿಸಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಲಾತೂರ್ ವ್ಯಾಪ್ತಿಯಲ್ಲಿ ಮಾರುಕಟ್ಟೆ ಆಧಾರಿತ ಕೃಷಿ ಸರಕುಗಳ ಬೆಳೆಗಳು ಪ್ರಮುಖ ಆಗಿರುವುದರಿಂದ ಹಾಗೂ ಈಗಾಗಲೇ ಜಿಲ್ಲೆಯಲ್ಲಿ ಎರಡು ಸೋಯಾಬೀನ್ ಸಂಸ್ಕರಣಾ ಘಟಕಗಳು ಇರುವುದರಿಂದ ಪತಂಜಲಿ ಇದೇ ಉದ್ಯಮದತ್ತ ದೃಷ್ಟಿ ನೆಟ್ಟಿದ ಎನ್ನಲಾಗುತ್ತಿದೆ.
ಎಂಎಸ್‌ಎಂಇ ಯೋಜನೆಗೆ ವ್ಯಾಪ್ತಿಗೆ ಒಳಪಡುವುದರಿಂದ ನಿರ್ದಿಷ್ಟ ಅವಧಿಗೆ ಶೇ 100 ಪ್ರತಿಶತದಷ್ಟು ಸ್ಟಾಂಪ್ ಡ್ಯೂಟಿ ಮನ್ನಾ ದೊರೆಯಲಿದೆ. ರಾಜ್ಯ ಜಿಎಸ್ಟಿ ಅನ್ವಯ ಪ್ರತಿ ಯೂನಿಟ್ ವಿದ್ಯುತ್ ಮೇಲೆ ಒಂದು ರೂಪಾಯಿ ವಿನಾಯಿತಿ ಸಿಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.