ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌ಎಟಿ) ಆದೇಶದ ವಿರುದ್ಧ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೈರಸ್ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅಡ್ಡ ಮೇಲ್ಮನವಿಗಳ ಕುರಿತು ಸುಪ್ರೀಂಕೋರ್ಟ್ ಶುಕ್ರವಾರ ತನ್ನ ತೀರ್ಪು ನೀಡಿದೆ.
ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಆದೇಶ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಆದೇಶವನ್ನ ವಜಾಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣದಲ್ಲಿ ರೂಪಿಸಲಾದ ಕಾನೂನಿನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಟಾಟಾಸನ್ಸ್ನ ಮೇಲ್ಮನವಿಗೆ ಕೋರ್ಟ್ ಅನುಮತಿ ನೀಡಿ, ಎನ್‌ಸಿಎಲ್‌ಎಟಿ ಆದೇಶವನ್ನು ಬದಿಗಿರಿಸಿದೆ. ಅಷ್ಟೇ ಅಲ್ಲ ಶಪೂರ್ಜಿ ಪಲ್ಲೊಂಜಿ ಮತ್ತು ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ.
ಅಧ್ಯಕ್ಷ ಸ್ಥಾನದಿಂದ ಮಿಸ್ತ್ರಿ ವಜಾ ಆದೇಶ ಎತ್ತಿ ಹಿಡಿದಿರುವ ಸುಪ್ರೀಂ, ಇನ್ನುಳಿದ ವಿವಾದಗಳಿಗೆ ಸಂಬಂಧಿಸಿದಂತೆ ಇರುವ ಪ್ರಕರಣಗಳ ತೀರ್ಪಿನ ಸಂಬಂದ ಇರುವ ಮೇಲ್ಮನವಿಗಳಿಗೆ ಸುಪ್ರೀಂ ಅನುಮತಿ ನೀಡಿತು. ಈ ತೀರ್ಪು ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿ ಸಾರ್ವಜನಿಕವಾಗಿ ಹೋರಾಡಿದ ಬೋರ್ಡ್ ರೂಮ್ಗಳ ಯುದ್ಧಗಳಿಗೆ ತೆರೆ ಬೀಳುವಂತೆ ಮಾಡಿದೆ.
ಇದನ್ನೂ ಓದಿ: 'ಆತ್ಮನಿರ್ಭರ' ಅಂದ್ರೆ ಏನು ಅಂತ ಅರ್ಥವಾಗಿಲ್ಲ; RBI ಮಾಜಿ ಗವರ್ನರ್
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು 2019ರ ಡಿಸೆಂಬರ್ 17ರ ಎನ್‌ಸಿಎಲ್‌ಎಟಿಯ ಆದೇಶವನ್ನು ಬದಿಗಿರಿಸಿತು. ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠವು ಕಳೆದ ವರ್ಷ ಡಿಸೆಂಬರ್ 17ರಂದು ಈ ತೀರ್ಪು ಕಾಯ್ದಿರಿಸಿತ್ತು. ಸೈರಸ್ ಇನ್ವೆಸ್ಟ್‌ಮೆಂಟ್ಸ್ ಮಾಡಿದ ಮನವಿಯನ್ನು ಇದೇ ವೇಳೆ ನ್ಯಾಯಪೀಠ ವಜಾಗೊಳಿಸಿತು.
ಕಾನೂನಿನ ಎಲ್ಲ ಪ್ರಶ್ನೆಗಳು ಟಾಟಾ ಸಮೂಹಕ್ಕೆ ಪೂರಕವಾಗಿಯೇ ಇವೆ, ಹೀಗಾಗಿ ಅವರು ಈ ಸಂಬಂಧ ಮೇಲ್ಮನವಿಗಳನ್ನು ಸಲ್ಲಿಸಲು ಸ್ವತಂತ್ರರಾಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ತೀರ್ಪಿನ ವೇಳೆ ಉಲ್ಲೇಖಿಸಿದ್ದಾರೆ.
ಪರಿಹಾರದ ಪ್ರಶ್ನೆಯ ಕುರಿತು ನಾವು ತೀರ್ಪು ನೀಡಲು ಸಾಧ್ಯವಿಲ್ಲ. ಅವರು 75 ನೇ ಪರಿಚ್ಛೇದದ ಅಡಿ ಮುಂದಕ್ಕೆ ಸಾಗಬಹುದು. ಟಾಟಾ ಸಮೂಹದ ಮೇಲ್ಮನವಿ ಎತ್ತಿಹಿಡಿಯಲಾಗಿದೆ. ಎಸ್‌ಪಿ ಗ್ರೂಪ್ ಹಾಗೂ ಸೈರಸ್ ಇನ್ವೆಸ್ಟ್‌ಮೆಂಟ್ಸ್‌ನ ಮೇಲ್ಮನವಿಯನ್ನೂ ವಜಾಗೊಳಿಸಲಾಗಿದೆ. ಷೇರುಗಳ ಸಮಸ್ಯೆಯನ್ನು ಪರಿಹರಿಸಲು ಕಾನೂನು ಮಾರ್ಗವನ್ನು ತೆಗೆದುಕೊಳ್ಳಲು ನಾವು ಅದನ್ನು ಟಾಟಾ ಸನ್ಸ್ ಮತ್ತು ಮಿಸ್ತ್ರಿಗಳಿಗೆ ಬಿಡುತ್ತೇವೆ. ಟಾಟಾ ಸನ್ಸ್ ಷೇರುಗಳ ಮೌಲ್ಯವು ಈಕ್ವಿಟಿಯನ್ನು ಅವಲಂಬಿಸಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು.
ಪ್ರಕರಣದ ಹೆಜ್ಜೆ ಗುರುತು:
ಅಕ್ಟೋಬರ್ 2016ರಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವುದು ಹೊಂಚಿನದಾಳಿಗೆ ಹೋಲುತ್ತದೆ ಮತ್ತು ಇದು ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಶಪೂರ್ಜಿ ಪಲ್ಲೊಂಜಿ (ಎಸ್‌ಪಿ) ಗ್ರೂಪ್ ಡಿಸೆಂಬರ್ 17ರಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿತ್ತು. ಕಾರ್ಪೊರೇಟ್ ಆಡಳಿತದ ತತ್ವಗಳು ಮತ್ತು ಸಂಘದ ನಿಯಮಗಳ ಉಲ್ಲಂಘನೆ ಎಂದಿತ್ತು.
ಮತ್ತೊಂದೆಡೆ, ಟಾಟಾ ಗ್ರೂಪ್ ಈ ಆರೋಪಗಳನ್ನು ತೀವ್ರವಾಗಿ ವಿರೋಧಿಸಿತ್ತು. ಯಾವುದೇ ತಪ್ಪು ಮಾಡುತ್ತಿಲ್ಲ. ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವ ಹಕ್ಕನ್ನು ಮಂಡಳಿ ಹೊಂದಿದೆ ಎಂದಿತ್ತು.
ಮಿಸ್ತ್ರಿ 2012ರಲ್ಲಿ ರತನ್ ಟಾಟಾ ಅವರ ನಂತರ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ನಾಲ್ಕು ವರ್ಷಗಳ ಬಳಿಕ ಅವರನ್ನು ಉಚ್ಛಾಟಿಸಲಾಯಿತು. 2012ರಲ್ಲಿ ಟಾಟಾ ಕುಟುಂಬಸ್ಥರು ಹೊರತುಪಡಿಸಿ ಮೊದಲ ಬಾರಿಗೆ ಸೈರಸ್ ಮಿಸ್ತ್ರಿ ಅವರು, ಟಾಟಾ ಸಮೂಹದ ಅತ್ಯುನ್ನತ ಹುದ್ದೆಗೆ ನೇಮಕ ಮಾಡಲಾಯಿತು. 2016ರ ಅಕ್ಟೋಬರ್ ತಿಂಗಳಲ್ಲಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಎನ್‌ಸಿಎಲ್‌ಎಟಿ ಮೊರೆ ಹೋಗಿದ್ದರು.