ನವದೆಹಲಿ: ಟಾಟಾ ಸನ್ಸ್ ಮತ್ತು ಸೈರಸ್ ಇನ್ವೆಸ್ಟ್‌ಮೆಂಟ್ಸ್ ವ್ಯಾಜ್ಯದ ಮೇಲ್ಮನವಿ ನ್ಯಾಯಾಧಿಕರಣದ ಎನ್‌ಸಿಎಲ್‌ಎಟಿ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿಯ ಅಂತಿಮ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠವು ಹಿರಿಯ ವಕೀಲ ಸಿ.ಎ.ಸುಂದರಂ ಅವರನ್ನು ಪ್ರಶ್ನಿಸಿ, ಪ್ರಕರಣದ ವಿಚಾರಣೆ ಸಂಬಂಧ ಪದೇ ಪದೆ ಅರ್ಜಿಗಳನ್ನು ಸಲ್ಲಿಸಿದ್ದಕ್ಕಾಗಿ ವಿಚಾರಣೆಯ ಅಂತಿಮ ಗಡುವು ನಿಗದಿಪಡಿಸಲಾಗಿದೆ. ಸೈರಸ್ ಮಿಸ್ತ್ರಿ ಮತ್ತು ಅವರ ಸಂಸ್ಥೆಗಳಿಗೆ ಆ ದಿನ ಹಾಜರಾಗುವಂತೆ ಸೂಚಿಸಿತು.
ಈ ವಿಷಯವನ್ನು ಈಗಾಗಲೇ ಅಂತಿಮ ವಿಚಾರಣೆಗೆ ಕಾಯ್ದಿರಿಸಲಾಗಿದೆ. ಮೇಲಿಂದ ಮೇಲೆ ಇಂಟರ್ಲೋಕ್ಯೂಟರಿ ಅರ್ಜಿಗಳನ್ನು (ಐಎ) ಏಕೆ ಸಲ್ಲಿಸುತ್ತಿದ್ದೀರಿ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ಸುಂದರಂ ಅವರನ್ನು ಪ್ರಶ್ನಿಸಿತು.
ಸುಂದರಂ ಸುಪ್ರೀಂ ಕೋರ್ಟ್‌ನ ನೋಟಿಸ್‌ಗೆ ಹೊಸದನ್ನು ತರಲು ಬಯಸುತ್ತೇವೆ ಎಂದು ಹೇಳಿದಾಗ, ನ್ಯಾಯಪೀಠ, 'ಈ ವಿಷಯಗಳು ಅಂತಿಮ ವಿಚಾರಣೆಯಲ್ಲಿ ಒಳಗೊಳ್ಳುವುದಿಲ್ಲವೇ? ಈ ಐಎಗಳಲ್ಲಿ ನೀವು ಎತ್ತುತ್ತಿರುವ ಎಲ್ಲಾ ಸಮಸ್ಯೆಗಳನ್ನು ಅಂತಿಮ ವಿಚಾರಣೆಯ ವೇಳೆ ತೆಗೆದುಕೊಳ್ಳಬಹುದು ಎಂದು ಪ್ರತಿಕ್ರಿಯಿಸಿತು.
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಪರ ಹಾಜರಾದ ಹಿರಿಯ ವಕೀಲ ಎ.ಎಂ.ಸಿಂಗ್ವಿ, ಸೆಪ್ಟೆಂಬರ್ 22ರಂದು ಸುಪ್ರೀಂ ಕೋರ್ಟ್ ಈಗಾಗಲೇ ಅಂತಿಮ ವಿಲೇವಾರಿಗಾಗಿ ಗಡುವು ನಿಗದಿಪಡಿಸಿದೆ ಎಂದರು. 'ಅಂತಿಮ ವಿಲೇವಾರಿಗೆ ಡಿಸೆಂಬರ್ 2ರಂದು ದಿನಾಂಕ ಮರು ನಿಗದಿ ಮಾಡಲಾಗಿದೆ' ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.