ನವದೆಹಲಿ: ಅಂತಿಮ ಬಿಡ್ಡಿಂಗ್ ದಿನಾಂಕಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಟಾಟಾ ಗ್ರೂಪ್ ಸಂಸ್ಥೆಯು ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಖರೀದಿಗೆ ಅಖಾಡಕ್ಕಿಳಿದಿದೆ.
ಈಗಾಗಲೇ ವಿಮಾನಯಾನ ವ್ಯವಹಾರದಲ್ಲಿ ಹೆಜ್ಜೆ ಗುರುತನ್ನು ಹೊಂದಿರುವ ಟಾಟಾ ಸಮೂಹ, ಏರ್ ಇಂಡಿಯಾ ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ತೋರಿಸಿದೆ. ಒಂದು ಕಾಲದಲ್ಲಿ ಇದು ಟಾಟಾ ಗ್ರೂಪ್ನಡಿಯಲ್ಲಿತ್ತು.
ಕೋವಿಡ್-19 ಸಾಂಕ್ರಾಮಿಕ, ಜಾಗತಿಕವಾಗಿ ವಿಮಾನಯಾನ ಮತ್ತು ಪ್ರವಾಸೋದ್ಯಮಕ್ಕೆ ಉಂಟಾದ ಅಡೆತಡೆಗಳಿಂದಾಗಿ ವಿಮಾನಯಾನ ಸಂಸ್ಥೆಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಹೀಗಾಗಿ ಬಿಡ್ ಸಲ್ಲಿಕೆಯಲ್ಲಿ ವಿಳಂಬವಾಯಿತು.
ಟಾಟಾ ಸಮೂಹವು ಬಿಡ್‌ನೊಂದಿಗೆ ಮುಂದುವರೆಯುವ ಸಾಧ್ಯತೆ ಇದೆ. ಅದರ ವಿಮಾನಯಾನ ಉದ್ಯಮ ಪಾಲುದಾರ ಸಿಂಗಾಪುರ್ ಏರ್‌ಲೈನ್ಸ್ ಕೋವಿಡ್-19 ಹೊಡೆತದಿಂದಾಗಿ ಏರ್ ಇಂಡಿಯಾ ಬಿಡ್‌ಗೆ ಸೇರಲು ನಿರಾಕರಿಸಿದೆ.
ಬಿಡ್ಡಿಂಗ್ ಮಾಡಲು ಕೊನೆಯ ದಿನಾಂಕವನ್ನು ಆಗಸ್ಟ್ 31ಕ್ಕೆ ನಿಗದಿಪಡಿಸಲಾಗಿದೆ. ಸರ್ಕಾರಕ್ಕೆ ಈ ಗಡುವನ್ನು ವಿಸ್ತರಿಸುವ ಇರಾದೆಯಿಲ್ಲ.
ಕೋವಿಡ್-19 ದಾಳಿಗೆ ಮುನ್ನ ಏರ್ ಇಂಡಿಯಾ ಗಂಭೀರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿತ್ತು. ಸಾಂಕ್ರಾಮಿಕ ರೋಗವು ಈಗ ಇನ್ನಷ್ಟು ದುರ್ಬಲಗೊಳಿಸಿದೆ. ಅದರ ಹಣಕಾಸಿನ ಸ್ಥಿತಿ ಮತ್ತಷ್ಟು ಅನಿಶ್ಚಿತತೆಗೆ ತಳ್ಳಲ್ಪಟ್ಟಿದೆ.
ಟಾಟಾ ಸನ್ಸ್‌ನ ಉದ್ಯಮಿ ಜೆಆರ್‌ಡಿ ಟಾಟಾ ಅವರು 1932ರಲ್ಲಿ ಟಾಟಾ ಏರ್‌ಲೈನ್ಸ್ ಸ್ಥಾಪಿಸಿದ್ದರು. ಇವರು ದೇಶದ ಮೊದಲ ಪೈಲಟ್ ಕೂಡ ಹೌದು. ಕರಾಚಿಯಿಂದ ಮುಂಬೈವರೆಗೆ ದೇಶದ ಮೊದಲ ವಿಮಾನ ಹಾರಾಟ ನಡೆಸಿದ ಹೆಗ್ಗಳಿಕೆಯೂ ಇವರ ಹೆಸರಿನಲ್ಲಿ ಇದೆ.
ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಟಾಟಾ ಏರ್‌ಲೈನ್ಸ್, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ ಇದನ್ನು ಪರಿವರ್ತಿಸಿತ್ತು. ಆ ನಂತರ ಸಂಸ್ಥೆಯ ಹೆಸರನ್ನು ‘ಏರ್ ಇಂಡಿಯಾ’ ಎಂದು ಬದಲಿಸಿತ್ತು.