ಬೆಂಗಳೂರು: ಉತ್ತಮ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಜ್ಯಗಳು ಕೋವಿಡ್ -19 ಹರಡುವಿಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿವೆ ಎಂದು ಜೈವಿಕ ತಂತ್ರಜ್ಞಾನ ಉದ್ಯಮಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದೆ ಓಡಾಡುವ ಜನರಿಗೆ ಹೊಡೆದರೂ ರೋಗದ ಬಗ್ಗೆ ಅವರಿಗೆ ತಿಳುವಳಿಕೆ ಬರುತ್ತಿಲ್ಲ. ಶಿಸ್ತು ಮತ್ತು ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸುವಂತೆ ಅವರು ಜನರಿಗೆ ಕರೆ ನೀಡಿದರು.
ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಹೊಂದಿದ್ದರಿಂದ ಥಾಯ್ಲೆಂಡ್ ಸಾಂಕ್ರಾಮಿಕ ರೋಗವನ್ನು ಹತೋಟಿಯಲ್ಲಿಟ್ಟಿದೆ. ಜಪಾನ್, ವಿಯೆಟ್ನಾಂ ಮತ್ತು ಥಾಯ್ಲೆಂಡ್‌ನಂತಹ ದೇಶಗಳಲ್ಲಿ ಜನರು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುತ್ತಾರೆ. ಅವರು ಸ್ವಾಭಾವಿಕವಾಗಿ ತುಂಬಾ ಸ್ವಚ್ಛತೆ, ಶಿಸ್ತುಬದ್ಧತೆ ಪಾಲಿಸುತ್ತಾರೆ. ಭಾರತ ಕೂಡ ಸ್ವಚ್ಛ ದೇಶವಾಗಬೇಕಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ತುಂಬಾ ದಟ್ಟವಾಗಿ ಮತ್ತು ಕೆಳ ಹಂತದ ಸಮೂಹಗಳಲ್ಲಿ ಭುಗಿಲೆದ್ದಿದೆ. ಬಡತನ ಮತ್ತು ಸಾಂದ್ರತೆಯು ಒಂದು ಸಂಯೋಜನೆಯಂತೆ ತೋರುತ್ತಿದ್ದು, ವೈರಸ್ ಹರಡಲು ಅನುವು ಮಾಡಿಕೊಡುತ್ತದೆ. ಆ ಪ್ರದೇಶಗಳಲ್ಲಿ ಸಾಮೂಹಿಕ ಪರೀಕ್ಷೆ ನಡೆಸಬೇಕು. ಪಾಸಿಟಿವ್ ಪ್ರಕರಣ ಕಂಡುಬಂದರೆ ಅವರನ್ನು ಪ್ರತ್ಯೇಕಿಸಬೇಕು ಎಂದರು.
ಜ್ವರ ತಪಾಸಣೆ, ಮುಖಗವಸು ಧರಿಸುವುದು, ಸಾಮಾಜಿಕ ಅಂತರದಂತಹ ಇತರೆ ಸುರಕ್ಷತೆ ಕ್ರಮಗಳೊಂದಿಗೆ ಆರ್ಥಿಕತೆಯನ್ನು ತೆರೆಯುವುದನ್ನು ಬಿಟ್ಟು ಭಾರತಕ್ಕೆ ಬೇರೆ ದಾರಿಯಿಲ್ಲ ಎಂದರು.
ಭಾರತದಂತಹ ದೇಶಕ್ಕೆ ಕಠಿಣ ಶಿಸ್ತು ಬೇಕು. ಸಾರ್ವಜನಿಕವಾಗಿ ಉಗುಳುವವರು ಮತ್ತು ಮಾಸ್ಕ್ ಧರಿಸದವರಿಗೆ ಕಡ್ಡಾಯವಾಗಿ ದಂಡ ವಿಧಿಸಬೇಕು. ಎಲ್ಲರಂತೆ ನಾನು ಚೆನ್ನಾಗಿದ್ದೇನೆ, ನಾನು ಸುರಕ್ಷಿತವಾಗಿದ್ದೇನೆ, ನನಗೆ ಏನೂ ಆಗುವುದಿಲ್ಲ ಎಂದು ಹೇಳುವಂತಿಲ್ಲ. ಈ ವೈರಸ್ನಿಂದ ಯಾರೂ ಸುರಕ್ಷಿತವಾಗಿಲ್ಲ ಎಂದು ಶಾ ಹೇಳಿದರು.