ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕುಗಳು (ಎಫ್‌ಎಂಸಿಜಿ) ಉತ್ಪಾದನಾ ಕಂಪನಿಗಳಾದ ಎಚ್ಯುಎಲ್, ಗೋದ್ರೇಜ್ ಹಾಗೂ ಪತಂಜಲಿ ಕೋವಿಡ್-19 ವಿರುದ್ಧದ ಸೆಣಸಾಟದಲ್ಲಿ ಕೈಜೋಡಿಸಿದ್ದು, ದರ ಇಳಿಸಿ ತಮ್ಮ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿವೆ.
ಎಫ್‌ಎಂಸಿಜಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹಿಂದೂಸ್ತಾನ ಯುನಿಲಿವರ್ ಲಿಮಿಟೆಡ್ ಶುಕ್ರವಾರ 100 ಕೋಟಿ ರೂ. ನಿಧಿಯನ್ನು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಬಳಸುವುದಾಗಿ ಹೇಳಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಎಚ್‌ಯುಎಲ್ ಲೈಫ್‌ಬಾಯ್ ಸ್ಯಾನಿಟೈಜರ್‌ಗಳು, ಲೈಫ್‌ಬಾಯ್ ಲಿಕ್ವಿಡ್ ಹ್ಯಾಂಡ್‌ವಾಶ್ ಮತ್ತು ಡೊಮೆಕ್ಸ್ ಫ್ಲೋರ್ ಕ್ಲೀನರ್‌ಗಳ ಬೆಲೆಯನ್ನು ಶೇ 15ರಷ್ಟು ಕಡಿಮೆಗೊಳಿಸುತ್ತಿದೆ. ನಾವು ಈ ಕಡಿಮೆ ಬೆಲೆಯ ಉತ್ಪನ್ನಗಳ ಉತ್ಪಾದನೆಯನ್ನು ಈ ತಕ್ಷಣದಿಂದಲೇ ಆರಂಭಿಸುತ್ತಿದ್ದೇವೆ. ಮುಂದಿನ ಕೆಲವು ವಾರಗಳಲ್ಲಿ ಇವು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತವೆ ಎಂದು ಎಚ್‌ಯುಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಲೈಫ್‌ಬಾಯ್ ಸ್ಯಾನಿಟೈಸರ್, ಲೈಫ್‌ಬಾಯ್ ಹ್ಯಾಂಡ್‌ವಾಶ್ ಲಿಕ್ವಿಡ್ ಮತ್ತು ಡೊಮೆಕ್ಸ್ ಉತ್ಪಾದನೆಯನ್ನು ಎಚ್‌ಯುಎಲ್ ದ್ವಿಗುಣಗೊಳಿಸಿದೆ. ಈ ಸ್ವಚ್ಛತಾ ಸರಕುಗಳು ಮುಂಬರುವ ವಾರಗಳಲ್ಲಿ ಅದನ್ನು ಇನ್ನಷ್ಟು ಹೆಚ್ಚಿಸುವ ವಾಗ್ದಾನ ನೀಡಿದೆ.
ಜನ ಸಾಮಾನ್ಯರ ಸಮಸ್ಯೆಯನ್ನು ಅರಿತು ಪತಂಜಲಿ ತನ್ನ ಸಾಬುನು ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಸಾಮಾನ್ಯ ಜನರಿಗೆ ಕೊರೊನಾ ನವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡಲು ಇದು ನೆರವಾಗಲಿದೆ ಎಂದು ಪತಂಜಲಿ ವಕ್ತಾರ ಎಸ್.ಕೆ. ತಿಜಾರಾವ್ಲಾ ಹೇಳಿದರು.
ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗಿದ್ದರೂ ಅದರ ಹೊರೆಯನ್ನು ಗ್ರಾಹಕರ ಮೇಲೆ ಹೇರದಿರಲು ಗೋದ್ರೆಜ್ ತೀರ್ಮಾನಿಸಿದೆ. ಸಾಬೂನು ವಿಭಾಗದಲ್ಲಿ ಬೆಲೆಗಳು 2019ರಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಕಚ್ಚಾ ವಸ್ತುಗಳ ಒಳಹರಿವು ಶೇ 30ರಷ್ಟು ಹೆಚ್ಚಳವಾಗಿದೆ ಎಂದು ಗೋದ್ರೆಜ್ ವಕ್ತಾರ ತಿಳಿಸಿದ್ದಾರೆ.