ಮುಂಬೈ: ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವಿನ ತೈಲ ಸಮರದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿವೆ. ಇದರ ನೇರ ಪರಿಣಾಮ ಜಾಗತಿಕ ಷೇರುಪೇಟೆಗಳ ಮೇಲೂ ಬೀರಿದೆ.
ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಕ್ರಮವಾಗಿ 1941.67 ಅಂಶಗಳು ಕುಸಿದು 35634.95 ಮಟ್ಟದಲ್ಲೂ ಹಾಗೂ 538 ಅಂಶಗಳು ಇಳಿಕೆಯಿಂದ 10451.45 ಮಟ್ಟದಲ್ಲಿ ನಿರಾಶಾದಾಯಕವಾಗಿ ಅಂತ್ಯಕಂಡಿತು.
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಷೇರುಗಳಲ್ಲಿ ಶೇ 12ರಷ್ಟು ಕುಸಿತವಾಗಿದ್ದು, ಕಳೆದ 10 ವರ್ಷಗಳಲ್ಲೇ ಮೊದಲ ಬಾರಿಗೆ ರಿಲಯನ್ಸ್ ಶೇರು ಇಷ್ಟೊಂದು ಕುಸಿತಕಂಡಿದೆ. ಈ ಹಿಂದೆ ಶೇ 13ರಷ್ಟು ಕ್ಷೀಣಿಸಿತ್ತು. ದಿನದ ಕನಿಷ್ಠ ಷೇರು ದರ ₹ 1,094 ದಾಖಲಾಗಿದೆ. 2008ರ ಬಳಿಕ ಇದು ಅತ್ಯಂತ ಕನಿಷ್ಠ ಮಟ್ಟದ ಇಳಿಕೆಯಾಗಿದೆ.
ಒಪೆಕ್ ರಾಷ್ಟ್ರಗಳು ಕೊರೊನಾ ವೈರಸ್ ಭೀತಿಯಿಂದ ಉತ್ಪಾದನೆ ಕಡಿತ ಮಾಡಲು ಮುಂದಾಗಿದ್ದು, ರಷ್ಯಾ ಇದಕ್ಕೆ ಅಡ್ಡಿಯಾಗಿದೆ. ಸೌದಿ ಅರೇಬಿಯಾ, ರಷ್ಯಾದ ಜೊತೆ ಕಚ್ಚಾ ತೈಲ ದರ ಸಮರಕ್ಕೆ ಇಳಿದಿದೆ. ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಶೇ 30ರಷ್ಟು ಕ್ಷೀಣಿಸಿದೆ.