ನವದೆಹಲಿ: ದಕ್ಷಿಣ ಕೋರಿಯಾದ ಎಲೆಕ್ಟ್ರಾನಿಕ್ ದೈತ್ಯ ಕಂಪನಿಯಾದ ಸ್ಯಾಮ್ಸಂಗ್, ಭಾರತದಲ್ಲಿ ತನ್ನ ಎಲ್ಟಿಡಿ ಟಿವಿ ತಯಾರಿಕ ಘಟಕ ತೆರೆಯಲು ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದು, ಮುಂದಿನ ವರ್ಷದಲ್ಲಿ ತನ್ನ ಉತ್ಪಾದನಾ ಕಾರ್ಯ ಆರಂಭಿಸಲಿದೆ.
ಕಳೆದ ವರ್ಷ ಸ್ಯಾಮ್ಸಂಗ್ ಟಿವಿ ಉತ್ಪಾದನಾ ಘಟಕವನ್ನು ಚೀನಾದಿಂದ ವಿಯಟ್ನಾಂಗೆ ವರ್ಗಾಯಿಸಿತ್ತು. ಇತ್ತೀಚೆಗೆ ಡಿಕ್ಸೋನ್ ಟೆಕ್ನಾಲಜಿ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರದರ್ಶನ ಫಲಕಗಳ ಮೇಲೆ ವಿಧಿಸಲಾದ ಕಸ್ಟಮ್ ಸುಂಕವನ್ನು ಶೂನ್ಯಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರದ ಬಳಿಕ ಟಿವಿ ಉತ್ಪಾದನೆ ಸ್ನೇಹಿ ವಾತಾವರಣ ಅನುಕೂಲಕರವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಯಾಮ್ಸಂಗ್ ಇತ್ತೀಚೆಗೆ ತನ್ನ ಟಿವಿ ಮೇಲಿನ ಬಂಡವಾಳವನ್ನು ಮುಕ್ತ ವ್ಯಾಪಾರ ಒಪ್ಪಂದದ (ಎಫ್ಟಿಎ) ಅನ್ವಯ ವಿಯಟ್ನಾಂನಿಂದ ಬೇರೆ ಕಡೆ ವರ್ಗಾಯಿಸಲು ನಿರ್ಧರಿಸಿದೆ. ಇದಕ್ಕೆ ಭಾರತವೇ ಸೂಕ್ತ ತಾಣವೆಂದು ಕಂಡುಕೊಂಡಿದ್ದು, ಭಾರತದಲ್ಲಿ ತನ್ನ ಉತ್ಪಾದನ ಘಟಕ ತೆರೆಯುವ ಒಪ್ಪಂದದ ಮಾತುಕತೆಯನ್ನು ಅದು ನಡೆಸುತ್ತಿದೆ. ಭಾರತೀಯ ಮಾರುಕಟ್ಟೆಯ ಟಿವಿ ವಿಭಾಗದಲ್ಲಿ ಸ್ಯಾಮ್ಸಂಗ್ ದೊಡ್ಡ ಪಾಲನ್ನು ಹೊಂದಿದೆ.
ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಸೆಪ್ಟೆಂಬರ್‌ನಲ್ಲಿ ಸರ್ಕಾರವು ಟಿವಿ ಸೆಲ್ ಪ್ಯಾನೆಲ್ (ಎಲ್‌ಇಡಿ ಟಿವಿ ತಯಾರಿಕೆಯಲ್ಲಿ ಬಳಕೆ) ಆಮದಿನ ಮೇಲೆ ವಿಧಿಸಲಾಗಿದ್ದ ಶೇ 5ರಷ್ಟು ಕಸ್ಟಮ್ಸ್ ಸುಂಕ ತೆಗೆದುಹಾಕಿತ್ತು. ಇದರ ಪ್ರಯೋಜನ ಪಡೆಯಲು ಹಾಗೂ ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ತನ್ನ ಪಾಲು ವಿಸ್ತರಿಸಿಕೊಳ್ಳಲು ಸ್ಯಾಮ್ಸಂಗ್ ಉತ್ಪಾದನಾ ಘಟಕ ತೆರೆಯಲು ಮುಂದಾಗಿದೆ.