ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ- 2019ರ ವರದಿ ಅನ್ವಯ ಭಾರತದ ನಂ. 1 ಕುಬೇರ ಎಂಬ ಸ್ಥಾನ ಪಡೆದಿದ್ದಾರೆ.
ತಮ್ಮ ಒಟ್ಟು ₹ 3.8 ಲಕ್ಷ ಕೋಟಿ ಸಂಪತ್ತಿನ ಮೂಲಕ ಭಾರತ ಮತ್ತು ಜಗತ್ತಿನ ಶ್ರೀಮಂತ ಉದ್ಯಮಿ ಎಂದೂ ಸಹ ಅವರು ಖ್ಯಾತಿ ಪಡೆದಿದ್ದಾರೆ. 2019ರ ಮಾರ್ಚ್ನಲ್ಲಿ ಫೋರ್ಬ್ಸ್ ಹೊರಡಿಸಿದ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅವರು 13ನೇ ಸ್ಥಾನ ಪಡೆದಿದ್ದರು.
ಸತತ 8ನೇ ವರ್ಷವೂ ಹುರುನ್ ಇಂಡಿಯಾ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರು ಮೊದಲನೇ ಸ್ಥಾನದಲ್ಲಿದ್ದು, ಲಂಡನ್ ಮೂಲದ ಎಸ್.ಪಿ ಹಿಂದೂಜಾ ಮತ್ತು ಕುಟುಂಬಸ್ಥರು ಎರಡನೇ ಸ್ಥಾನ ಪಡೆದಿದ್ದಾರೆ. ಇವರ ಸಂಪತ್ತಿನ ಮೌಲ್ಯ 1.68 ಲಕ್ಷ ಕೋಟಿಯಷ್ಟಿದೆ. ಇತ್ತೀಚೆಗೆ ವಿಪ್ರೋ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಸಂಸ್ಥಾಪಕ ಅಜಿಂ ಪ್ರೇಮ್ಜೀ ಮತ್ತು ಏರ್ಸಿಲರ್ ಮಿತ್ತಲ್ ಸಿಇಒ ಲಕ್ಷ್ಮಿ ಮಿತ್ತಲ್ ಅವರು ಜಂಟಿಯಾಗಿ 3ನೇ ಸ್ಥಾನ ಹಂಚಿಕೊಂಡಿದ್ದಾರೆ. ಇವರ ಸಂಪತ್ತು ಕ್ರಮವಾಗಿ ₹ 1.17 ಲಕ್ಷ ಕೋಟಿ ಹಾಗೂ ₹ 1.07 ಲಕ್ಷ ಕೋಟಿ ಹೊಂದಿದ್ದಾರೆ.
ಉದಯ್ ಕೋಟಕ್ (₹ 94,100 ಕೋಟಿ), ಸೈರಸ್ ಎಸ್. ಪೂನವಾಲ್ಲಾ (₹ 88,800 ಕೋಟಿ), ಸೈರಸ್ ಪಲ್ಲೊಂಜಿ ಮಿಸ್ತ್ರಿ (₹ 76,800 ಕೋಟಿ), ಶಪೂರ್ ಪಲ್ಲೊಂಜಿ (₹ 76,800 ಕೋಟಿ) ಹಾಗೂ ದಿಲೀಪ್ ಸಾಂಘ್ವಿ (₹ 71,500 ಕೋಟಿ) ಟಾಪ್ ಹತ್ತರೊಳಗೆ ಸ್ಥಾನಪಡೆದಿದ್ದಾರೆ.