ನವದೆಹಲಿ: ಮೈಕ್ರೊಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಸ್ಥಾಪಿಸಿದ ಎಲೆಕ್ಟ್ರಿಕ್ ಕಂಪನಿಯಿಂದ ಭಾರತದ ಪ್ರಥಮ ಎಲೆಕ್ಟ್ರಿಕ್ ಬೈಕ್ ಬುಧವಾರ ಲೋಕಾರ್ಪಣೆಗೊಂಡಿದೆ.
‘ರೆವೊಲ್ಟ್ ಮೋಟರ್ಸ್ ‘ ತನ್ನ ಮೊದಲ ಎಲೆಕ್ಟ್ರಿಕ್ ಬೈಕನ್ನು ‘ರೆವೊಲ್ಟ್ ಆರ್ವಿ 400' ಮತ್ತು 'ಆರ್ವಿ 300' ಹೆಸರಿನಡಿ ಎರಡು ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಅನೇಕ ವಿಶೇಷತೆಗಳನ್ನು ಒಳಗೊಂಡಿರುವ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಸಂಪೂರ್ಣವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾಗಿದೆ. ಈ ಬೈಕ್ನಲ್ಲಿ 4ಜಿ ಸಿಮ್ ಕಾರ್ಡ್ ಅಳವಡಿಸಲಾಗಿದ್ದು, ಇಂಟರ್ನೆಟ್ ಸಂಪರ್ಕದ ಮೂಲಕವೂ ಚಾಲನೆ ಮಾಡಬಹುದಾಗಿದೆ. ಆಂಡ್ರಾಯ್ಡ್ ಜೊತೆಗೆ ಐಫೋನ್ ಆ್ಯಪ್ ಇದಕ್ಕೆ ಹೊಂದಿಕೆಯಾಗಲಿದ್ದು, ಮೊಬೈಲ್ ಮುಖೇನ ಬೈಕ್ ನಿಯಂತ್ರಿಸಬಹುದು.
ನೂತನ ಬೈಕ್ಗಳ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಆಸಕ್ತ ಬೈಕ್ಪ್ರಿಯರು ಕಂಪನಿಯ ವೆಬ್ಸೈಟ್ಗೆ ಭೇಟಿ ನೀಡಿ ಕೇವಲ 1,000 ರೂ. ಕೊಟ್ಟು ಅಡ್ವಾನ್ಸ್ ಬುಕ್ಕಿಂಗ್ ಮಾಡಬಹುದು. 37 ತಿಂಗಳವರೆಗೂ ಮಾಸಿಕ 2,999 ರೂ. ಪಾವತಿಸಿ ರೆವೊಲ್ಟ್ ಬೈಕ್ ತಮ್ಮದಾಗಿಸಿಕೊಳ್ಳಬಹುದು. ಆದರೆ, 'ರೆವೊಲ್ಟ್ ಆರ್ವಿ 300' ಇನ್ನೂ ಪ್ರವೇಶದ ಹಂತದಲ್ಲಿದ್ದು, ಇನ್ನಷ್ಟು ಸುಧಾರಣೆಯಾಗಬೇಕಿದೆ.
ಬೈಕ್ ವಿನ್ಯಾಸ ಸಾಮಾನ್ಯ ಪೆಟ್ರೋಲ್ ಬೈಕ್ಗಳಂತೆ ಇರಲಿದೆ. ಪ್ರತಿ ಗಂಟೆಗೆ 85 ಕಿಲೋ ಮೀಟರ್ ವೇಗ ಚಲಿಸುವ ಬೈಕ್ ರೆವೊಲ್ಟ್, ಒಮ್ಮೆ ಚಾರ್ಜ್ ಮಾಡಿದ್ರೆ, 156 ಕಿಲೋ ಮೀಟರ್ನಷ್ಟು ದೂರ ಕ್ರಮಿಸುತ್ತದೆ. ಬ್ಯಾಟರಿ ಭಾಗವನ್ನು ಸುಲಭವಾಗಿ ತೆರೆಯಬಹುದಾಗಿದ್ದು, ಮನೆಯಲ್ಲಿಯೂ ಚಾರ್ಜ್ ಮಾಡಬಹುದು.