ಬೆಂಗಳೂರು: ಕೆಲವು ದುಷ್ಕರ್ಮಿಗಳು ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿ, ತಾವು ಜಿಯೋಮಾರ್ಟ್ ಭಾಗವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಜಿಯೋಮಾರ್ಟ್ ಸೇವೆಯ ಫ್ರಾಂಚೈಸಿ ನೀಡುವುದಾಗಿ ಅಮಾಯಕರನ್ನು ವಂಚಿಸುತ್ತಿರುವುದು ಕಂಪನಿಯ ಗಮನಕ್ಕೆ ಬಂದಿದೆ. ಇಂಥ ದುಷ್ಕರ್ಮಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ರಿಲಯನ್ಸ್ ರೀಟೇಲ್ ತಿಳಿಸಿದೆ.
ರಿಲಯನ್ಸ್‌ನ ಸಾಮಾಜಿಕ ಜಾಲತಾಣ ಪ್ಲಾಟ್ಫಾರ್ಮ್ಗಳಲ್ಲಿ ಎಚ್ಚರಿಕೆ ನೋಟಿಸ್ ಹಾಕಲಾಗಿದೆ. ಸಾರ್ವಜನಿಕರ ಗಮನಕ್ಕೆ ತರಲು ಬಯಸುವ ವಿಷಯ ಏನೆಂದರೆ, ಸದ್ಯಕ್ಕೆ ಯಾವುದೇ ಡೀಲರ್ಶಿಪ್ ಅಥವಾ ಫ್ರಾಂಚೈಸಿ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಫ್ರಾಂಚೈಸಿ- ಏಜೆಂಟ್ ನೇಮಕ ಮಾಡಿಕೊಂಡು, ಆ ಮೂಲಕ ಹೊಸ ಡೀಲರ್ ಅಥವಾ ಫ್ರಾಂಚೈಸಿಯನ್ನು ಯಾವುದೇ ಬಗೆಯಲ್ಲೂ ನೇಮಿಸಿಕೊಳ್ಳುತ್ತಿಲ್ಲ. ಫ್ರಾಂಚೈಸಿ ಆಗಿ ನೇಮಿಸಿಕೊಳ್ಳುವ ಸಲುವಾಗಿ ಯಾವ ಹಣ ಸಹ ಪಡೆಯುತ್ತಿಲ್ಲ ಎಂದು ತಿಳಿಸಿದೆ.
ಕೆಲವು ದುಷ್ಕರ್ಮಿಗಳು ಕೆಲವು ನಕಲಿ ವೆಬ್ಸೈಟ್ ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ. ತಾವು ಜಿಯೋ ಮಾರ್ಟ್ ಜತೆಗೆ ನಂಟನ್ನು ಹೊಂದಿದ್ದೇವೆ ಎಂದು ಬಿಂಬಿಸಿಕೊಂಡು, ಜಿಯೋಮಾರ್ಟ್ ಸೇವೆಯ ಫ್ರಾಂಚೈಸಿ ನೀಡುವುದಾಗಿ ಅಮಾಯಕ ಜನರನ್ನು ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದೆ.
ಈ ನಕಲಿ ವೆಬ್ಸೈಟ್ಗಳ ವಿಳಾಸ ಹೀಗಿವೆ:
jmartfranchise.in
jiomartfranchiseonline.com
jiodealership.com
jiomartsfranchises.online
jiomartfranchises.com
jiomart-franchise.com
jiomartshop.info
jiomartindia.in.net
jiomartreliance.com
jiomartfranchise.co
ಕಂಪನಿಯ ಟ್ರೇಡ್ ಮಾರ್ಕ್ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ದಾವೆ ಹೂಡಲು ಕಂಪೆನಿ ಹಿಂಜರಿಯುವುದಿಲ್ಲ. ಕಂಪನಿಯ ಪ್ರತಿಷ್ಠೆ ಹಾಗೂ ವರ್ಚಸ್ಸು ರಕ್ಷಿಸಿಕೊಳ್ಳುವುದು ಆದ್ಯತೆಯ ವಿಷಯವಾಗಿದೆ ಎಂದು ರಿಲಯನ್ಸ್ ರೀಟೇಲ್ ನೋಟಿಸ್ನಲ್ಲಿ ಎಚ್ಚರಿಕೆ ನೀಡಿದೆ. ಇಂಥ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಕಂಪನಿಯ ಕಾನೂನು ವಿಭಾಗಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದೆ.