ಮುಂಬೈ: ಬಿಲಿಯೇನರ್ ಮುಖೇಶ್ ಅಂಬಾನಿ ಮುಂದಾಳತ್ವದ ರಿಲಯನ್ಸ್ ಇಂಡಿಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಮುಂಬೈ ಷೇರುಪೇಟೆಯ ಮಂಗಳವಾರದ ವಹಿವಾಟಿನಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಮಾರುಕಟ್ಟೆ (ಎಂ-ಕ್ಯಾಪ್) ಮೌಲ್ಯ 9.5 ಲಕ್ಷ ಕೋಟಿ ರೂ. ಗಡಿ ದಾಟುವ ಮೂಲಕ ಆರ್ಐಎಲ್ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಕಳೆದ ವಹಿವಾಟಿನ ವಾರಾಂತ್ಯದಲ್ಲಿ ಮಾರುಕಟ್ಟೆ ಬಂಡವಾಳದ ಮೌಲ್ಯವು 9.1 ಲಕ್ಷ ಕೋಟಿ ರೂ.ಗಳಷ್ಟಾಗಿತ್ತು. ಈಗ ಇದು ದಶಕದ ಸನಿಹಕ್ಕೆ ಬಂದು ತಲುಪಿದೆ.
ಮುಂಬೈ ಷೇರು ಸೂಚ್ಯಂಕದಲ್ಲಿ ಇಂದು ರಿಲಯನ್ಸ್ ಷೇರು ಮೌಲ್ಯದಲ್ಲಿ ಶೇ.3.52ರಷ್ಟು ಏರಿಕೆ ಕಂಡು ₹1,509.08ರಲ್ಲಿ ವಹಿವಾಟು ನಡೆಸಿತ್ತು. ದಿನದ ವಹಿವಾಟಿನ ಮಧ್ಯಂತರ ಅವಧಿಯಲ್ಲಿ ಗರಿಷ್ಠ ಶೇ.3.89 ಏರಿಕೆಯಾಗಿ ಪ್ರತಿ ಷೇರು ಬೆಲೆಯು ದಾಖಲೆಯ ₹ 1,514.95 ಮಟ್ಟಕ್ಕೆ ತಲುಪಿತ್ತು.
ಬಿಎಸ್ಇನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 32,525.22 ಕೋಟಿಯಿಂದ ₹ 9,57,086.22 ಕೋಟಿಗೆ ಬಂದು ತಲುಪಿದೆ. ಕಳೆದ ತಿಂಗಳ ಮಧ್ಯಂತರ ವಹಿವಾಟಿನಂದು ₹9 ಲಕ್ಷ ಕೋಟಿಯಷ್ಟು ಮಾರುಕಟ್ಟೆ ಬಂಡವಾಳ ದಾಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ ಪಡೆದಿತ್ತು.
ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಅಗಸ್ಟ್ನಲ್ಲಿ ದೇಶಿಯ ಕಂಪನಿಗಳ ಪೈಕಿ ಆರ್ಐಎಲ್ ₹ 8 ಲಕ್ಷ ಕೋಟಿ ಗಡಿ ದಾಟಿತ್ತು. ಈಗ ಅದು ₹ 9.5 ಲಕ್ಷ ಕೋಟಿ ತಲುಪಿ ದಶಕದ ಹತ್ತಿರವಿದೆ.