ಮುಂಬೈ: ವಿಮೆನ್ಸ್ ಗ್ಲೋಬಲ್ ಡೆವಲಪ್ಮೆಂಟ್ ಆ್ಯಂಡ್ ಪ್ರಾಸ್ಪರಿಟಿ (ಡಬ್ಲ್ಯುಜಿಡಿಪಿ) ಕಾರ್ಯಕ್ರಮದ ಭಾಗವಾಗಿ ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಹಾಗೂ ರಿಲಯನ್ಸ್ ಫೌಂಡೇಷನ್ ಜಂಟಿಯಾಗಿ ಭಾರತದಲ್ಲಿನ ಸ್ತ್ರೀ-ಪುರುಷರ ಮಧ್ಯೆ ಡಿಜಿಟಲ್ ಸಮಾನತೆ ("ಜೆಂಡರ್ ಡಿಜಿಟಲ್ ಡಿವೈಡ್") ತರಲು ಮುಂದಾಗಿವೆ.
ಇತ್ತೀಚೆಗೆ ನಡೆದ ಡಬ್ಲ್ಯುಜಿಡಿಪಿ ಸಮಾರಂಭದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಯಿತು. ಈ ವೇಳೆ ಇವಾಂಕಾ ಟ್ರಂಪ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗುವಂಥ ಹೊಸ ಕಾರ್ಯಕ್ರಮಗಳಿಗೆ ಸಂಪನ್ಮೂಲ ಒದಗಿಸಲು ಹಾಗೂ ವಿಸ್ತರಣೆಗೆ ನೆರವಾಗಲು ಡಬ್ಲ್ಯುಜಿಡಿಪಿ ನಿಧಿ ಸೃಷ್ಟಿಯಾಗಿದೆ. ಅದಕ್ಕಾಗಿ ಅಮೆರಿಕ ಸರ್ಕಾರ ಮತ್ತು ಖಾಸಗಿ ವಲಯವನ್ನು ಒಗ್ಗೂಡಿಸಿಕೊಂಡಿದ್ದೇವೆ. ಉದ್ದೇಶಿತ ಸಮುದಾಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದರು.
ಯುಎಸ್ಎಐಡಿ ಹಂಗಾಮಿ ಆಡಳಿತಾಧಿಕಾರಿ ಜಾನ್ ಬರ್ಸಾ ಮಾತನಾಡಿ, ಮಹಿಳೆಯರು ವಿಶ್ವದ ಅರ್ಧ ಜನಸಂಖ್ಯೆಯಷ್ಟಿದ್ದು, ನಾವು ಅವರನ್ನು ಹೊರಗಿಟ್ಟಲ್ಲಿ ಅಭಿವೃದ್ಧಿಯಾಗದು. ಬದಲಾವಣೆಯ ಮಟ್ಟದಲ್ಲಿ ಹೂಡಿಕೆಯಲ್ಲಿ ಮಹಿಳೆಯರನ್ನು ಪಾಲುದಾರರನ್ನಾಗಿಸಬೇಕು. ಸ್ತ್ರೀ ಹಾಗೂ ಪುರುಷರ ಮಧ್ಯೆ ಇರುವ ಆರ್ಥಿಕತೆ ಅಂತರ ತಗ್ಗಿಸಲು ಹೊಸ ಆರ್ಥಿಕ ಪರಿಹಾರಗಳಿಗೆ ಯುಎಸ್ಎಐಡಿ ಬಳಿ ಇರುವ ಡಬ್ಲ್ಯುಜಿಡಿಪಿ ನಿಧಿಯನ್ನು ಬಳಸಲಿದೆ ಎಂದು ತಿಳಿಸಿದರು.
ವರ್ಚುವಲ್ ವಿಡಿಯೋ ಮೂಲಕ ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ನೀತಾ ಅಂಬಾನಿ ಸಂದೇಶ ನೀಡಿದ್ದು, ರಿಲಯನ್ಸ್ ಫೌಂಡೇಷನ್ ಡಬ್ಲ್ಯುಜಿಡಿಪಿ ಸೇರಿಕೊಳ್ಳುತ್ತಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. 2020ರಲ್ಲಿ ಭಾರತದಾದ್ಯಂತ ವಿಮೆನ್ ಕನೆಕ್ಷನ್ ಚಾಲೆಂಜ್ ಆರಂಭಿಸಲಿದ್ದೇವೆ. ಲಿಂಗ ಅಸಮಾನತೆ ಹಾಗೂ ಭಾರತದಲ್ಲಿ ಡಿಜಿಟಲ್ ಸಮಾನತೆ ತುಂಬಬೇಕಿದೆ ಎಂದರು.