ನವದೆಹಲಿ: ಭಾರತೀಯ ರೈಲ್ವೆ 2,700 ಎಲೆಕ್ಟ್ರಿಕ್ ಮತ್ತು 3,800 ಡೀಸೆಲ್ ಲೋಕೋಮೋಟಿವ್‌ಗಳಲ್ಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಅಳವಡಿಸಿದೆ. 2021ರ ಡಿಸೆಂಬರ್ ವೇಳೆಗೆ 6,000 ಲೋಕೋಮೋಟಿವ್‌ಗಳಲ್ಲಿ ಸಂಯೋಜಿಸಲಾಗುವುದು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದರು.
ವರ್ಚ್ಯುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲುಗಳಿಗೆ ಉಪಗ್ರಹ ಟ್ರ್ಯಾಕಿಂಗ್ ಸೇರಿದಂತೆ ಎಲ್ಲಾ ಪ್ರಮುಖ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗಿದೆ ಎಂದರು.
2,700 ಎಲೆಕ್ಟ್ರಿಕ್ ಮತ್ತು 3,800 ಡೀಸೆಲ್ ಲೋಕೋಮೋಟಿವ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಹೆಚ್ಚುವರಿ 600 ಲೋಕೋಮೋಟಿವ್‌ಗಳು ಜಿಪಿಎಸ್ ವ್ಯವಸ್ಥೆಗೆ ಒಳಪಡಲಿವೆ. 2021ರ ಡಿಸೆಂಬರ್ ವೇಳೆಗೆ 6,000 ಲೋಕೋಮೋಟಿವ್‌ಗಳು ಜಿಪಿಎಸ್ ಸೇವೆ ಹೊಂದಲಿವೆ ಎಂದು ಯಾದವ್ ಹೇಳಿದರು.
ರಾಷ್ಟ್ರೀಯ ಸಾರಿಗೆಯು ಇಸ್ರೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ರೈಲ್ವೆ ಕಾರ್ಯಾಚರಣೆ ಸುಧಾರಣೆಗೆ ನೆರವಾಗಲಿದೆ. ಜಿಪಿಎಸ್ ಅನ್ನು ಡೇಟಾ ನಿಯಂತ್ರಣ ಕಚೇರಿಯ ಕಾರ್ಯಾಚರಣೆ, ಎನ್‌ಟಿಐಎಸ್, ವಿಶ್ಲೇಷಣೆ ಮತ್ತು ಸುರಕ್ಷತಾ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂದು ವಿವರಿಸಿದರು.
ಕೊರೊನಾ ವೈರಸ್ನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯ ಸರ್ಕಾರಗಳ ಬೇಡಿಕೆಯ ಮೇರೆಗೆ ನಾವು ಎರಡು ವಿಶೇಷ ರೈಲುಗಳು ಮತ್ತು ನಾಲ್ಕು ವೇಳಾಪಟ್ಟಿಯಡಿ ನಿಗದಿಪಡಿಸಿ ವಿಶೇಷ ರೈಲುಗಳನ್ನು ರದ್ದುಪಡಿಸಲಾಗಿದೆ ಎಂದರು.