ನವದೆಹಲಿ: ರಷ್ಯಾದಲ್ಲಿ ದೇಶೀಯ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ ಸಿಗುತ್ತಿದ್ದಂತೆ ಇತ್ತ ಭಾರತದಲ್ಲಿಯೂ ಕೂಡ ಕೋವಾಕ್ಸಿನ್ ಲಸಿಕೆ ಅಭಿವೃದ್ಧಿಯು ಮಹತ್ವದ ಹಂತ ತಲುಪಿದೆ.
ಭಾರತದ ಮೊದಲ ಪ್ರಾಯೋಗಿಕ ಕೊರೊನಾ ವೈರಸ್ ಲಸಿಕೆ ‘ಕೋವಾಕ್ಸಿನ್’ನ 2ನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಮಂಗಳವಾರ ನಾಗ್ಪುರದಲ್ಲಿ ಪ್ರಾರಂಭವಾಯಿತು. ಇಲ್ಲಿನ ಗಿಲ್ಲೂರ್ಕರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 2ನೇ ಹಂತದ ಮಾನವ ಪ್ರಯೋಗಗಳಿಗೆ ಚಾಲನೆ ದೊರೆತಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ ಕೋವಿಡ್- 19 ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
ದೇಶದಲ್ಲಿ ಮೊದಲನೇ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ‘ಕೋವಾಕ್ಸಿನ್’ 30 ದಿನ ತೆಗೆದುಕೊಂಡಿದೆ. ಈ ಲಸಿಕೆಯ ಮಾನವ ಪ್ರಯೋಗಗಳಿಗಾಗಿ 12 ಕೇಂದ್ರಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.
ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್), ಏಮ್ಸ್ ಪಾಟ್ನಾ, ಹರಿಯಾಣದ ಪಿಜಿಐ ರೋಹ್ಟಕ್, ಗೋವಾದ ರೆಡ್ಕರ್ ಆಸ್ಪತ್ರೆ, ಭುವನೇಶ್ವರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಆಸ್ಪತ್ರೆಗಳಲ್ಲಿ ಔಷಧಿಯ ಪ್ರಯೋಗಗಳು ನಡೆಯಲಿವೆ.
ಇವುಗಳಲ್ಲದೇ, ಕೋವಾಕ್ಸಿನ್ ಕ್ಲಿನಿಕಲ್ ಪರೀಕ್ಷಾ ತಾಣಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ, ಕರ್ನಾಟಕದ ಬೆಳಗಾವಿ, ಮಹಾರಾಷ್ಟ್ರದ ನಾಗ್ಪುರ, ಉತ್ತರ ಪ್ರದೇಶದ ಗೋರಖ್ಪುರ ಮತ್ತು ಕಾನ್ಪುರ್, ತಮಿಳುನಾಡಿನ ಕಟ್ಟಂಕುಲತೂರ್ ಮತ್ತು ತೆಲಂಗಾಣದ ಹೈದರಾಬಾದ್ನಲ್ಲಿವೆ.