ಅಹಮದಾಬಾದ್: ತನ್ನ ಪರವಾನಿಗೆ ಇಲ್ಲದೆ ಪೇಟೆಂಟ್ ಹೊಂದಿರುವ ಆಲೂಗಡ್ಡೆ ಬೆಳೆದಿದ್ದಾರೆ ಎಂದು ಗುಜರಾತ್ನ ನಾಲ್ವರು ರೈತರ ವಿರುದ್ಧ ದಾವೆ ಹೂಡಿದ್ದ ಪೆಪ್ಸಿಕೋ, ಈಗ ಈ ಪ್ರಕರಣವನ್ನು ಕೋರ್ಟ್ನ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಿದ್ದವಿರುವುದಾಗಿ ಹೇಳಿದೆ.
ಬಡ ರೈತರನ್ನು ನ್ಯಾಯಾಲಯಕ್ಕೆ ಎಳೆದು ತಂದ ಪೆಪ್ಸಿಕೋ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕಂಪೆನಿಯು ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದೆ.
ಗುಜರಾತ್ನ ಸಬರ್ಕಾಂತಾದಲ್ಲಿ ನಾಲ್ವರು ರೈತರು ನೋಂದಾಯಿತ ಎಫ್ಎಲ್- 202 ಆಲೂಗಡ್ಡೆ ತಳಿಯನ್ನು ಅಕ್ರಮವಾಗಿ ಬೆಳೆಯುತ್ತಿದ್ದಾರೆ ಎಂದು ಆರೋಪಿಸಿದ ಪೆಪ್ಸಿಕೋ ಇಂಡಿಯಾ, ಏಪ್ರಿಲ್ 11 ರಂದು ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಪರಿಹಾರ ಮೊತ್ತವಾಗಿ ಪ್ರತೀ ರೈತರು ತಲಾ 1.05 ಕೋಟಿ ರೂ. ತೆರಬೇಕು ಮತ್ತು ರೈತರು ಆಲೂಗಡ್ಡೆ ಬೆಳೆಯಲು ಕಂಪನಿಯಿಂದ ಬೀಜ ಖರೀದಿಸದ ಕಾರಣಕ್ಕೆ ತೀವ್ರ ನಷ್ಟವಾಗಿದೆ ಎಂದು ಅದಕ್ಕೆ ಸ್ಪಷ್ಟನೆಯನ್ನೂ ನೀಡಿತ್ತು.
ಈ ಕುರಿತು ವಾಣಿಜ್ಯ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡು, ವಿವಾದವನ್ನು ಜವಾಬ್ದಾರಿಯುತವಾಗಿ ಇತ್ಯರ್ಥ ಮಾಡಿಕೊಳ್ಳುವಂತೆ ಪೆಪ್ಸಿಕೋಗೆ ಸೂಚಿಸಿತ್ತು.
ಮುಂದಿನ ವಿಚಾರಣೆಯು ಜೂನ್ 12ರಂದು ನಡೆಯಲಿದ್ದು ಅಲ್ಲಿಯವರೆಗೂ ಪೇಟೆಂಟ್ ಬೀಜಗಳನ್ನು ಬೆಳೆಯದಂತೆ ರೈತರಿಗೆ ನ್ಯಾಯಮೂರ್ತಿ ಎಂ.ಸಿ ತ್ಯಾಗಿ ಆದೇಶಿಸಿದ್ದಾರೆ.