ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಚಿಂತನೆ ನಡೆಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾದ ಹ್ಯಾಂಡ್‌ಸೆಟ್ ತಯಾರಕ ವಿವೋ ಟೈಟಲ್ ಪ್ರಾಯೋಜಕತ್ವದಿಂದ ನಿರ್ಗಮಿಸಲು ನಿರ್ಧರಿಸಿದೆ. ಇದರಿಂದ ತೆರವಾದ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವ ಸ್ಲಾಟ್ ಖಾಲಿಯಾಗಿದೆ. ಹರಿದ್ವಾರ ಮೂಲದ ಸಂಸ್ಥೆಗೆ ಜಾಗತಿಕ ಮಾರುಕಟ್ಟೆ ವೇದಿಕೆ ಪ್ರವೇಶಿಸಲು ಇದನ್ನು ಮಾರುಕಟ್ಟೆ ತಂತ್ರವಾಗಿ ಬಳಸಿಕೊಳ್ಳಲು ಚಿಂತನೆ ನಡಿಸಿದೆ. ಪತಂಜಲಿ ಈ ಮೂಲಕ ತನ್ನ ಆಯುರ್ವೇದ ಎಫ್‌ಎಂಸಿಜಿ ಉತ್ಪನ್ನಗಳನ್ನು ಸಾಗರೋತ್ತರ ರಫ್ತು ಮಾಡುವತ್ತ ಗಮನ ಹರಿಸುತ್ತಿದೆ.
ನಾವು ಇದನ್ನು ಪರಿಗಣಿಸುತ್ತಿದ್ದೇವೆ. ವೋಕಲ್ ಫಾರ್ ಲೋಕಲ್ ಮತ್ತು ಭಾರತೀಯ ಬ್ರಾಂಡ್ ಅನ್ನು ಜಾಗತಿಕ ಪ್ಲಾಟ್ಫಾರ್ಮ್ಗೆ ತೆಗೆದುಕೊಂಡು ಹೋಗುವಂತಹ ದೃಷ್ಟಿಕೋನ ಇರಿಸಿಕೊಂಡಿದ್ದೇವೆ ಎಂದು ಪತಂಜಲಿ ವಕ್ತಾರ ಎಸ್.ಕೆ. ತಿಜರಾವಾಲಾ ಪಿಟಿಐಗೆ ತಿಳಿಸಿದರು.
ಈ ವಿಷಯದ ಬಗ್ಗೆ ಕಂಪನಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿಲ್ಲ. ಈಗ ನಾವು ಮಾತ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ನಾವು ಅದನ್ನು ತೆಗೆದುಕೊಳ್ಳುತ್ತೇವೆಯೇ ಇಲ್ಲವೇ ಎಂಬುದನ್ನು ಈಗ ಹೇಳಲ್ಲ ಎಂದರು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಬಿಡ್ ಖರೀದಿ ಆಸಕ್ತಿಗೆ ಆಹ್ವಾನಿಸಿದೆ. ಆಗಸ್ಟ್ 14 ರೊಳಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಕಳೆದ ವಾರ ಬಿಸಿಸಿಐ ಮತ್ತು ವಿವೊ 2020 ಐಪಿಎಲ್‌ಗಾಗಿ ತಮ್ಮ ಪಾಲುದಾರಿಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಶೀರ್ಷಿಕೆ ಪ್ರಾಯೋಜಕತ್ವವು ಐಪಿಎಲ್‌ನ ವಾಣಿಜ್ಯ ಆದಾಯದ ಮಹತ್ವದ ಭಾಗವಾಗಿದ್ದು, ಅದರಲ್ಲಿ ಅರ್ಧದಷ್ಟು ಪಾಲು ಫ್ರಾಂಚೈಸಿಗಳು ಸಮಾನವಾಗಿ ಹಂಚಿಕೊಳ್ಳುತ್ತಾರೆ. ವಿವೊ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು 2018ರಿಂದ 2022ರವರೆಗೆ ಐದು ವರ್ಷಗಳ ಕಾಲ 2,190 ಕೋಟಿ ರೂ.ಗಳಷ್ಟಿದೆ.
ಅಮೆಜಾನ್, ಟಾಟಾ ಗ್ರೂಪ್, ಡ್ರೀಮ್ 11, ಜಿಯೊ, ಅದಾನಿ ಮತ್ತು ಬೈಜು ಸೇರಿದಂತೆ ಅನೇಕ ಬ್ರಾಂಡ್‌ಗಳು ಟೈಟಲ್ ಪ್ರಾಯೋಜಕತ್ವಕ್ಕಾಗಿ ಸ್ಪರ್ಧಿಸುತ್ತಿವೆ.