ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ವಾಹನೋದ್ಯಮ ಕುಸಿತದಿಂದಾಗಿ ತನ್ನ 3,000 ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.
ಎಂಎಸ್ಐ ಅಧ್ಯಕ್ಷ ಆರ್.ಸಿ. ಭಾರ್ಗವ ಮಾತನಾಡಿ, ಉದ್ಯಮ ಬೆಳವಣಿಗೆಯ ನಿಧಾನಗತಿಯ ಕಾರಣದಿಂದಾಗಿ ತಾತ್ಕಾಲಿಕ ನೌಕರರ ಒಪ್ಪಂದಗಳನ್ನು ನವೀಕರಿಸಲಾಗಿಲ್ಲ. ಆದರೆ, ಕಾಯಂ ಉದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದು ಒಂದು ವ್ಯವಹಾರದ ಭಾಗವಷ್ಟೆ. ಬೇಡಿಕೆ ಹೆಚ್ಚಾದಾಗ ಮತ್ತೆ ಹೆಚ್ಚಿನ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಪ್ರಸ್ತುತ ದಿನಗಳಲ್ಲಿನ ಕುಸಿತ ಮತ್ತು ಉತ್ಪಾದನಾ ಕಡಿತವು ಮಾರುತಿಯಲ್ಲಿ ಉದ್ಯೋಗ ಕಡಿತಕ್ಕೆ ಕಾರಣವೆಂದರು.
ವಾಹನೋದ್ಯಮದ ಸೇವೆ, ವಿಮೆ, ವಾಹನ ಪರವಾನಗಿ, ಹಣಕಾಸು, ಬಿಡಿ ಭಾಗಗಳು, ಚಾಲಕ, ಪೆಟ್ರೋಲ್ ಪಂಪ್ಸ್, ಸಾರಿಗೆ ಸೇರಿದಂತೆ ಇತರೆ ಘಟಗಳಲ್ಲಿ ಉದ್ಯೋಗ ನೀಡುತ್ತಿದ್ದು, ಆಟೋ ಕ್ಷೇತ್ರದ ಹಿನ್ನಡೆಯಿಂದ ಉದ್ಯೋಗ ಸೃಷ್ಟಿಗೆ ಹಿನ್ನೆಡೆಯಾಗಿದೆ ಎಂದರು.