ಬೆಂಗಳೂರು: ತನ್ನ ಸಾಲದ ಹೊರೆಯನ್ನು ತಗ್ಗಿಸಲು 'ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್' (ಸಿಡಿಇಎಲ್) ಮಂಡಳಿಯು ಬೆಂಗಳೂರಿನಲ್ಲಿರುವ 9 ಎಕರೆ ತಂತ್ರಜ್ಞಾನ ಪಾರ್ಕ್ ಮಾರಾಟ ಮಾಡುವ ನಿರ್ಧರಿಸಿದೆ.
ಸಿಡಿಇಎಲ್ ಕಾಫಿ ಡೇ ಗ್ರೂಪ್ ಸಂಸ್ಥೆ ಹಿಡುವಳಿ ಕಂಪನಿಯಾಗಿದ್ದು, ಹೆಚ್ಚುತ್ತಿರುವ ಕಾಫಿ ಡೇ ಸಾಲದ ಹೊರೆಯನ್ನು ಅಲ್ಪ ಮಟ್ಟದಲ್ಲಿ ಇಳಿಸಿಕೊಳ್ಳಲು ಈ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ಇಕ್ವಿಟಿ ದೈತ್ಯ ಬ್ಲಾಕ್‌ಸ್ಟೋನ್ ಗ್ರೂಪ್, ಟ್ಯಾಂಗ್ಲಿನ್ ಡೆವಲಪ್‌ಮೆಂಟ್ಸ್ ಲಿಮಿಟೆಡ್ (ಸಿಡಿಇಎಲ್‌ನ ಒಂದು ಘಟಕ) ಒಡೆತನದ ಗ್ಲೋಬಲ್ ವಿಲೇಜ್ ಪಾರ್ಕ್ ಅನ್ನು ಖರೀದಿಸುವ ಸ್ಪರ್ಧಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕಳೆದ ವಾರ ನ್ಯೂಯಾರ್ಕ್ ಮೂಲದ ಕಂಪನಿಯು ಟ್ಯಾಂಗ್ಲಿನ್ ಡೆವಲಪ್‌ಮೆಂಟ್ಸ್ ಖರೀದಿಸುವ ಮಾತುಕತೆಯನ್ನು ಪುನರಾರಂಭಿಸಿತು.
ಬೆಂಗಳೂರಿನಲ್ಲಿನ ಐಟಿ ಪಾರ್ಕ್ ಮಾರಾಟಕ್ಕೆ ಮಂಡಳಿಯು ತನ್ನ ತಾತ್ವಿಕ ಅನುಮೋದನೆ ನೀಡಿದೆ. ಬ್ಲಾಕ್‌ಸ್ಟೋನ್ ಸಂಭಾವ್ಯ ಖರೀದಿದಾರರಲ್ಲಿ ಮೊದಲ ಸ್ಥಾನದಲ್ಲಿದೆ. ಸಿಡಿಇಎಲ್ ಮತ್ತು ಅದರ ಅಂಗಸಂಸ್ಥೆಗಳು ಸ್ವತ್ತು ಮಾರಾಟದಿಂದ ಹಣ ಪಡೆಯವ ಪರವಾಗಿದೆ ಎನ್ನಲಾಗುತ್ತಿದೆ.
ಗುರುವಾರ ಸಿಡಿಇಎಲ್ ಮಂಡಳಿಯ ನಡೆಸಿದ ಸಭೆಯಲ್ಲಿ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಅದರಲ್ಲಿ ಪ್ರಮುಖ ಸಾಲದ ಹೊರೆ ಕಡಿಮೆ ಮಾಡಲು ಕಾಫಿ ಡೇ ಗ್ರೂಪ್ನ ಸ್ವತ್ತುಗಳನ್ನು ಮಾರಿ ಸಂಸ್ಥಾಪಕ/ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಮರಣದ ನಂತರವೂ ಸಿಡಿಇಎಲ್ ವ್ಯವಹಾರಗಳನ್ನು ಸುಗಮವಾಗಿ ಮುಂದುವರಿಸಿಕೊಂಡು ಹೋಗುವುದಾಗಿದೆ.