ನವದೆಹಲಿ: ಕೊರೊನಾದಂತಹ ಬಿಕ್ಕಟ್ಟಿನ ಸಮಯದಲ್ಲಿ ನಗರಗಳಿಂದ ತಮ್ಮ ಊರುಗಳಿಗೆ ತೆರಳುತ್ತಿರುವ ವಲಸಿಗ ಕಾರ್ಮಿಕರಿಗೆ ರೈಲ್ವೆ ಟಿಕೆಟ್ ದರ ವಿಧಿಸುತ್ತಿರುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ಭಾರತೀಯ ರೈಲ್ವೆ ಇಲಾಖೆ ತನ್ನ ಸ್ಪಷ್ಟನೆಯೊಂದನ್ನು ನೀಡಿದೆ.
ಇದು ಕೇವಲ ರಾಜ್ಯಗಳ ಹಕ್ಕೆಂದು ಸ್ಪಷ್ಟವಾಗಿ ಹೇಳಿದೆ ರೈಲ್ವೆ ಸಚಿವಾಲಯ, ಪ್ರಯಾಣ ಟಿಕೆಟ್ ದರ ಸಂಗ್ರಹಿಸುವಲ್ಲಿ ರೈಲ್ವೆಗೆ ಯಾವುದೇ ಪಾತ್ರವಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ತನ್ನ ನಿಲುವವನ್ನು ಪ್ರಕಟಿಸಿದೆ.
ಕೋವಿಡ್-19 ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಶುಲ್ಕ ವಿಧಿಸಿದ್ದಕ್ಕಾಗಿ ವಿರೋಧ ಪಕ್ಷಗಳಿಂದ ಕೇಂದ್ರ ತೀವ್ರ ಟೀಕೆಗೆ ಗುರಿಯಾಯಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಬಗ್ಗೆ ಕೇಂದ್ರದ ಮೇಲೆ ತೀವ್ರ ವಾಗ್ದಾಳಿ ನಡೆಸಿ, 'ಪ್ರತಿ ನಿರ್ಗತಿಕ ಮತ್ತು ವಲಸೆ ಕಾರ್ಮಿಕರ ರೈಲು ಪ್ರಯಾಣದ ವೆಚ್ಚ ಕಾಂಗ್ರೆಸ್ ಸಮಿತಿ ಭರಿಸಲಿದೆ' ಎಂದು ಘೋಷಿಸಿದರು.
ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ. ವಲಸೆ ಕಾರ್ಮಿಕರನ್ನು ಸಾಗಿಸಲು ವಿಶೇಷ ರೈಲುಗಳ ಓಡಾಟಕ್ಕೆ ರೈಲ್ವೆಯು ಶೇ 85 ಟಿಕೆಟ್ ಶುಲ್ಕದ ಸಬ್ಸಿಡಿ ನೀಡಿದರೇ ಉಳಿದ ಶೇ 15 ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿಸಬೇಕಾಗಿದೆ ಎಂದು ಬಿಜೆಪಿ ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ನೀಡಿತ್ತು.
ವಿಶೇಷ ರೈಲು ಯೋಜನೆಯಲ್ಲಿ ರೈಲ್ವೆಯೂ ತನ್ನ ಪಾತ್ರವನ್ನು ಸಂಪೂರ್ಣವಾಗಿ ನಿರಾಕರಿಸಿದೆ. ವಲಸಿಗರಿಗೆ ರೈಲು ಪ್ರಯಾಣಕ್ಕೆ ಶುಲ್ಕ ವಿಧಿಸುವ ನಿರ್ಧಾರವು ರಾಜ್ಯ ಸರ್ಕಾರಗಳದ್ದೇ 'ಸಂಪೂರ್ಣ ಹಕ್ಕು' ಎಂದು ಹೇಳಿದೆ.
ಈ ಹಿಂದೆ ಗೃಹ ಸಚಿವಾಲಯವು ವಿಶೇಷ ರೈಲುಗಳ ಮೂಲಕ ವಲಸೆ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿತ್ತು. ವಿವಿಧ ರಾಜ್ಯ ಸರ್ಕಾರಗಳು ರೈಲ್ವೆ ಸಚಿವಾಲಯವನ್ನು ತಮ್ಮ ರೈಲು ಪ್ರಯಾಣಕ್ಕೆ ವಲಸೆ ಕಾರ್ಮಿಕರಿಗೆ ಶುಲ್ಕ ವಿಧಿಸದಂತೆ ವಿನಂತಿಸಿದವು. ಆದರೆ, ರಾಜ್ಯದ ಬೇಡಿಕೆಗಳಿಗೆ ವಿರುದ್ಧವಾಗಿ ವಲಸೆ ಕಾರ್ಮಿಕರು ರೈಲು ಪ್ರಯಾಣಕ್ಕೆ ವೆಚ್ಚ ಭರಿಸಬೇಕಾಯಿತು.
ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರವೇ ರಾಜ್ಯಗಳಿಗೆ ಕಳುಹಿಸುವ ರೈಲ್ವೆಗೆ ಏಕೀಕೃತ ಶುಲ್ಕ ಪಾವತಿಸಲಾಗುತ್ತದೆ. ಕಳುಹಿಸುವ ರಾಜ್ಯವೇ ಈ ವೆಚ್ಚ ಭರಿಸಬಹುದು ಅಥವಾ ಪ್ರಯಾಣಿಕರಿಂದ ತೆಗೆದುಕೊಳ್ಳಬಹುದು ಅಥವಾ ಪರಸ್ಪರ ಸಮಾಲೋಚನೆಯ ನಂತರ ತೆಗೆದುಕೊಳ್ಳಬಹುದು. ಇದು ಸಂಪೂರ್ಣವಾಗಿ ಅವರ ಹಕ್ಕು ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಿಕೆಟ್ ಇಲ್ಲದೆ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಪ್ರತಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದೇವೆ. ತೆಗೆದುಕೊಂಡ ಶುಲ್ಕ, ಒಂದೇ ವರ್ಗದ್ದು, ಅದು ಸ್ಲೀಪರ್ ವರ್ಗವಾಗಿದೆ ಎಂದು ತಿಳಿಸಿದ್ದಾರೆ.