ನವದೆಹಲಿ: ರೈಲ್ವೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಕುರಿತು ಕಳೆದ ಕೆಲವು ವರ್ಷಗಳಿಂದ ವಾದ-ಪ್ರತಿವಾದಗಳು ನಡೆಯುತ್ತಿದ್ದು, ಈ ಕುರಿತು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.
'ಯಾವುದೇ ಕಾರಣಕ್ಕೂ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ಅಥವಾ ಖಾಸಗಿಯವರಿಗೆ ರೈಲು ಓಡಿಸಲು ಅನುಮತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಯಾವುದೇ ವಿಶೇಷ ಪ್ರಯಾಣಿಕ ರೈಲುಗಳನ್ನು ಖಾಸಗಿ ಸೇವೆಗೆ ನೀಡುವುದಿಲ್ಲ' ಎಂದು ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ.
ಕೆಲವು ಮೂಲಗಳಿಂದ 'ನವ ದೆಹಲಿ-ಲಕ್ನೋ ತೇಜಸ್ ಎಕ್ಸ್ಪ್ರೆಸ್' ರೈಲು ಖಾಸಗೀಕರಣದಲ್ಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಮಾತ್ರ ಹೊರಬಿದ್ದಿಲ್ಲ.
ಮುಂದಿನ ದಿನಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ರೈಲ್ವೆಯನ್ನು ಖಾಸಗೀಕರಣಕ್ಕೆ ಒಳಪಡಿಸುವ ಯೋಚನೆ ಇದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದರು. ಆದರೆ, ಗೋಯಲ್ ಖಾಸಗೀಕರಣದ ಪ್ರಸ್ತಾವನೆಯೇ ಇಲ್ಲ ಎನ್ನುತ್ತಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.