ನವದೆಹಲಿ: 1986-87 ರಿಂದ ಈವರೆಗೆ 20 ಲಕ್ಷ ವಾಹನಗಳನ್ನು ರಫ್ತು ಮಾಡಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. 1986-87 ರಲ್ಲಿ ರಫ್ತು ಪ್ರಾರಂಭಿಸಿದ ಕಂಪನಿ ಮೊದಲ 500 ಕಾರುಗಳನ್ನು ಹಂಗೇರಿಗೆ ಕಳಿಸಿತು.
2012 -13 ರ ವೇಳೆಗೆ ಕಂಪನಿಯು ಒಂದು ಮಿಲಿಯನ್ ವಾಹನಗಳನ್ನು ರಫ್ತು ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮೊದಲ 10 ಲಕ್ಷದಲ್ಲಿ ಯೂರೋಪ್ ರಾಷ್ಟ್ರಗಳಿಗೆ ಶೇಕಡಾ 50 ಕ್ಕಿಂತ ಹೆಚ್ಚು ವಾಹನಗಳನ್ನು ರಫ್ತು ಮಾಡಲಾಯಿತು. ನಂತರದ 8 ವರ್ಷಗಳಲ್ಲಿ ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾ ರಾಷ್ಟ್ರಗಳಿಗೆ 10 ಲಕ್ಷ ಕಾರುಗಳನ್ನು ಕಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ನಿರಂತರ ಪ್ರಯತ್ನಗಳಿಂದ ಚಿಲಿ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾಗಳಲ್ಲಿಯೂ ಕಂಪನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಆಲ್ಟೊ, ಬಾಲೆನೊ, ಡಿಜೈರ್ ಮತ್ತು ಸ್ವಿಫ್ಟ್ ಮಾದರಿ ಕಾರುಗಳು ಎಲ್ಲರ ಮನ ಸೆಳೆದಿದ್ದು ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆಯನ್ನಿರಿಸಿಕೊಂಡಿವೆ.
ಪ್ರಸ್ತುತ 14 ವಿಧದ ವಾಹನಗಳನ್ನು 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಜನವರಿಯಲ್ಲಿ ಕಾಂಪ್ಯಾಕ್ಟ್ ಆಫ್-ರೋಡರ್ ಜಿಮ್ನಿಯ ಉತ್ಪಾದನೆ ಮತ್ತು ರಫ್ತು ಪ್ರಾರಂಭಿಸಿದ್ದೇವೆ. ಭಾರತದಲ್ಲಿ ಮಾತ್ರ ಜಿಮ್ನಿಯನ್ನು ತಯಾರಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಈ ವಾಹನಕ್ಕೆ ಭಾರಿ ಬೇಡಿಕೆಯಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.