ನವದೆಹಲಿ: ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕಾ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ), ತನ್ನ ಜನಪ್ರಿಯ ಸಿಯಾಜ್, ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಶ್ರೇಣಿಯ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದೆ.
ಕಾರಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಮೋಟಾರ್ ಜನರೇಟರ್ ಘಟಕದಲ್ಲಿ ದೋಷಯುಕ್ತ ಭಾಗ (ಎಂಜಿಯು) ಸರಿಪಡಿಸಲು ಸಿಯಾಜ್, ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಮಾದರಿಯ 63,493 ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.
ಎಂಜಿಯು ಭಾಗದಲ್ಲಿ ಸಂಭಾವ್ಯ ಸಮಸ್ಯೆಯು ಕಾರು ತಯಾರಿಕೆಯ ಸಂದರ್ಭದಲ್ಲಿ ಉಂಟಾಗಿರಬಹುದು ಎಂಬ ಶಂಕೆ ಇದೆ. ಕಂಪನಿಯು ಸಿಯಾಜ್, ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಶ್ರೇಣಿಯ ಪೆಟ್ರೋಲ್ ಎಸ್‌ಎಚ್‌ವಿಎಸ್‌ನ 63,493 ವಾಹನಗಳನ್ನು ಪರಿಶೀಲಿಸಲಾಗುವುದು. 2019ರ ಜನವರಿ ಹಾಗೂ ನವೆಂಬರ್ 21ರ ಅವಧಿಯ ನಡುವೆ ತಯಾರಿಸಲಾದ ಕಾರುಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದೇವೆ ಎಂದಿದೆ.
ಗ್ರಾಹಕರ ಹಿತದೃಷ್ಟಿಯಿಂದ ಕಂಪನಿಯು ತಪಾಸಣೆಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ದೋಷ ಸರಿಪಡಿಸಿದ ತಕ್ಷಣ ಗ್ರಾಹಕರಿಗೆ ವಾಪಸ್ ನೀಡಲಾಗುವುದು. ದೋಷಪೂರಿತ ಭಾಗವನ್ನು ಉಚಿತವಾಗಿ ಸರಿಪಡಿಕೊಡಲಾಗುವುದು. ಡಿಸೆಂಬರ್ 6ರಿಂದ ಕಾರು ಮರುಪಡೆಯುವಿಕೆ ಆರಂಭವಾಗಲಿದೆ. ಶಂಕಿತ ವಾಹನಗಳ ಮಾಲೀಕರು ಮಾರುತಿ ಸುಜುಕಿ ವಿತರಕರನ್ನು ಸಂಪರ್ಕಿಸಿ ದೋಷಪೂರಿತ ಭಾಗವನ್ನು ಬದಲಿಸಿಕೊಳ್ಳುವಂತೆ ಎಂಎಸ್ಐ ತಿಳಿಸಿದೆ.