ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಲಾಭಾಂಶದ ವರದಿ ಬಿಡುಗಡೆ ಮಾಡಿದ್ದು, ಕಂಪನಿಯ ನಿವ್ವಳ ಲಾಭ ಶೇ. 4.13ರಷ್ಟು ಏರಿಕೆಯಾಗಿದೆ.
ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು ₹ 1,564.4 ಕೋಟಿಯಷ್ಟು ಏರಿಕೆಯಾಗಿದೆ. ಈ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.13ರಷ್ಟು ಹೆಚ್ಚಳವಾಗಿದೆ.
ವೆಚ್ಚದ ಕಡಿತ, ಕಡಿಮೆ ಮಟ್ಟದ ನಿರ್ವಹಣಾ ವೆಚ್ಚ, ಕಡಿಮೆ ಬೆಲೆಯ ಸರಕುಗಳು ಹಾಗೂ ಕಾರ್ಪೊರೇಟ್ ತೆರಿಗೆ ದರದಲ್ಲಿನ ಕಡಿತದಂತಹ ನಡೆಗಳಿಂದಾಗಿ ಲಾಭಾಂಶದಲ್ಲಿ ಏರಿಕೆ ಕಂಡುಬಂದಿದೆ.
ಈ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಒಟ್ಟಾರೆ ಆದಾಯವು 20,721.8 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 19,680.7 ಕೋಟಿ ರೂ.ಗಳಷ್ಟಿತ್ತು. ಆದಾಯದ ಬೆಳವಣಿಗೆಯು ಶೇ. 5.29ರಷ್ಟು ಹೆಚ್ಚಳವಾಗಿದೆ.
ಈ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 4,37,361 ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 2ರಷ್ಟು ಏರಿಕೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ವಾಹನ ಮಾರಾಟವು 4,13,698 ಯುನಿಟ್ ಆಗಿದ್ದು, ಹಿಂದಿನ ವರ್ಷಕ್ಕಿಂತ ಶೇ 2ರಷ್ಟು ವೃದ್ಧಿಯಾಗಿದೆ. ರಫ್ತು ಪ್ರಮಾಣ 23,663 ಯುನಿಟ್‌ಗಳಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.