ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನವೇ ಅಡುಗೆ ಅನಿಲ ದರದಲ್ಲಿ ಇಳಿಕೆ ಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಹಾಗೂ ಡಾಲರ್ ಮೌಲ್ಯದ ಪ್ರಭಾವದಿಂದ ಅಡುಗೆ ಅನಿಲ ದರದಲ್ಲಿ ವ್ಯತ್ಯಾಸವಾಗಿದೆ. ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ₹ 100.50 ಇಳಿಕೆಯಾಗಿದೆ. ಈ ಹಿಂದೆ ₹ 737.50ಕ್ಕೆ ದೊರೆಯುತ್ತಿದ್ದ ಸಿಲಿಂಡರ್ ಜುಲೈ 1ರಿಂದ ₹ 637ಕ್ಕೆ ಲಭ್ಯವಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಕಳೆದ ಜೂನ್ 1ರಂದು ಸಬ್ಸಿಡಿ ರಹಿತ ಗ್ಯಾಸ್ ಬೆಲೆಯಲ್ಲಿ ₹ 25 ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರ್ ಬೆಲೆ ₹ 1.23 ಹೆಚ್ಚಳವಾಗಿ ಸತತ ನಾಲ್ಕನೇ ಬಾರಿಗೆ ಎಲ್ಪಿಜಿ ಬೆಲೆ ಏರಿಕೆಯಾಗಿತ್ತು.
ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ ಪರಿಷ್ಕರಣೆ ಬಳಿಕ ₹ 494.35ಗೆ ದೊರೆಯಲಿದ್ದು, ₹142.65 ಕೇಂದ್ರ ಸರ್ಕಾರವು ಸಬ್ಸಿಡಿಯಾಗಿ ಭರಿಸಲಿದೆ. ರೀಫಿಲ್ ಖರೀದಿಸಿದ ನಂತರ ಗ್ರಾಹಕರ ಬ್ಯಾಂಕ್ ಖಾತೆಗೆ ಈ ಹಣ ವರ್ಗಾಯಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.