ಮುಂಬೈ: ಕೋವಿಡ್-19ರ ಹಿನ್ನೆಲೆಯಲ್ಲಿ ಪಾಲಿಸಿದಾರರು ಎದುರಿಸುತ್ತಿರುವ ಕಷ್ಟಗಳನ್ನು ತಗ್ಗಿಸಲು 2020ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪಾವತಿಸಬೇಕಾದ ಪ್ರೀಮಿಯಂ ಪಾವತಿಗೆ 30 ದಿನಗಳ ವಿಸ್ತರಣೆ ಗಡುವು ಜೀವ ವಿಮಾ ನಿಗಮ ನೀಡಿದೆ.
ಮಾರ್ಚ್ 22ರ ನಂತರ ಗ್ರೇಸ್ ಅವಧಿ ಮುಕ್ತಾಯವಾಗುತ್ತಿರುವ ಫೆಬ್ರವರಿ ಪ್ರೀಮಿಯಂಗಳಿಗೆ ಏಪ್ರಿಲ್ 15ರವರೆಗೆ ಪಾವತಿಸುವ ಅವಕಾಶವಿದೆ ಎಂದು ಎಲ್ಐಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಐಸಿಯ ಪಾಲಿಸಿದಾರರು ಯಾವುದೇ ಸೇವಾ ಶುಲ್ಕವಿಲ್ಲದೆ ಎಲ್ಐಸಿಯ ಡಿಜಿಟಲ್ ಪಾವತಿ ಆಯ್ಕೆಗಳ ಮೂಲಕ ಪ್ರೀಮಿಯಂಗಳನ್ನು ಪಾವತಿಸಬಹುದು.
ಪಾಲಿಸಿದಾರರು ಪ್ರೀಮಿಯಂ ಪಾವತಿಸಲು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಆದರೆ, ಮೂಲ ವಿವರಗಳನ್ನು ನೀಡುವ ಮೂಲಕ ನೇರವಾಗಿ ಪಾವತಿಸಬಹುದು ಎಂದು ತಿಳಿಸಿದೆ.
ಮೊಬೈಲ್ ಅಪ್ಲಿಕೇಷನ್ ಎಲ್ಐಸಿ ಪೇ ಡೈರೆಕ್ಟ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಪ್ರೀಮಿಯಂಗಳನ್ನು ಕಟ್ಟಬಹುದು.
ಪಾಲಿಸಿ ಪ್ರೀಮಿಯಂಗಳನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಮತ್ತು ಪಾವತಿ ಅಪ್ಲಿಕೇಷನ್‌ಗಳಾದ ಪೇಟಿಎಂ, ಫೋನ್ಪೇ, ಗೂಗಲ್ ಪೇ, ಭೀಮ್ ಆ್ಯಪ್, ಯುಪಿಎ ಮೂಲಕ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದೆ.
ಐಡಿಬಿಐ ಮತ್ತು ಎಕ್ಸಿಸ್ ಬ್ಯಾಂಕ್ ಶಾಖೆಗಳಲ್ಲಿ ಮತ್ತು ಬ್ಲಾಕ್ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ಸಿ) ಮೂಲಕ ಪ್ರೀಮಿಯಂಗಳನ್ನು ಪಾವತಿಸಬಹುದು.
ಕೋವಿಡ್-19 ಸೋಂಕಿನಿಂದ ಮೃತಪಟ್ಟರೆ ಇತರ ಕಾರಣಗಳಿಗೆ ಸಮನಾಗಿ ಪರಿಗಣಿಸಲಾಗುವುದು. ವಿಮಾ ಪಾವತಿಗಳನ್ನು ತುರ್ತು ಆಧಾರದ ಮೇಲೆ ವಿಲೇವಾರಿ ಮಾಡಲಾಗುವುದು ಎಂದು ಪಾಲಿಸಿದಾರರಿಗೆ ಭರವಸೆ ನೀಡಿದೆ.