ತಿರುವನಂತಪುರಂ: ಕೇರಳದ ಅತಿದೊಡ್ಡ ಐಟಿ ಉದ್ಯೋಗದಾತ ಯುಎಸ್ಟಿ ಗ್ಲೋಬಲ್ ಕಂಪನಿ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪನಿಯ ವಾರ್ಷಿಕ ಡೆವಲಪರ್ ಡಿ- 3 ಕಾನ್ಫರೆನ್ಸ್ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮನು ಗೋಪಿನಾಥ್, ಶೀಘ್ರವೇ ಕೊಚ್ಚಿಯಲ್ಲಿ ಹೊಸ ಕ್ಯಾಂಪಸ್ ತೆರೆಯಲಾಗುತ್ತಿದೆ. ಇದರ ಕಾರ್ಯಾರಂಭ ಆದ ಕೂಡಲೇ 8,000ದಿಂದ 10,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಯುಎಸ್ಟಿ ಗ್ಲೋಬಲ್ ಪ್ರಸ್ತುತ, 25 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಾಗತಿಕವಾಗಿ 23,000 ಜನರಿಗೆ ಕೆಲಸ ನೀಡಿದ್ದೇವೆ. ಇದರಲ್ಲಿ 14,000 ಮಂದಿ ಭಾರತದಲ್ಲಿದ್ದು, ಕೊಚ್ಚಿಯ ಎರಡು ಕೇಂದ್ರಗಳಲ್ಲಿ 8,000 ಜನ ದುಡಿಯುತ್ತಿದ್ದಾರೆ ಎಂದು ವಿವರ ನೀಡಿದರು.
ಈಗಾಗಲೇ ನಮ್ಮದೇ ಲ್ಯಾಪ್‌ಟಾಪ್ ಬ್ರಾಂಡ್ ಆರಂಭಿಸಿದ್ದೇವೆ. ಇದಕ್ಕೆ ಕೇರಳ ರಾಜ್ಯ ಸರ್ಕಾರದ ಬೆಂಬಲವೂ ದೊರೆತಿದೆ. ಶೀಘ್ರದಲ್ಲೇ ನಮ್ಮ ಉತ್ಪಾದನಾ ಸೌಲಭ್ಯವನ್ನೂ ವಿಸ್ತರಿಸಲಿದ್ದೇವೆ ಎಂದು ಗೋಪಿನಾಥ್ ಹೇಳಿದರು.
ಜಾಗತಿಕವಾಗಿ 365 ಸ್ಟಾರ್ಟ್ಅಪ್ಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಕೇರಳ ಸ್ಟಾರ್ಟ್ಅಪ್ ಮಿಷನ್‌ನೊಂದಿಗೆ ನಿಕಟ ಸಂಬಂಧ ಹೊಂದಿದ್ದೇವೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಲು ಯಾವಾಗಲೂ ಸಿದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.