ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ), ಶುಕ್ರವಾರ ಪ್ರತಿ ಷೇರಿಗೆ 4.25 ರೂ.ನಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ 2,060 ಕೋಟಿ ರೂ. ಹರಿದು ಹೋಗಲಿದೆ.
ಇಂದು (ಶುಕ್ರವಾರ) ನಡೆದ ಸಭೆಯಲ್ಲಿ ಕಂಪನಿಯ ನಿರ್ದೇಶಕರ ಮಂಡಳಿಯು ಮಧ್ಯಂತರ ಲಾಭಾಂಶವನ್ನು ಶೇ 42.50ರಷ್ಟು, ಅಂದರೆ 2019-2020ರ ಆರ್ಥಿಕ ವರ್ಷಕ್ಕೆ ತಲಾ 10 ರೂ. ಮುಖಬೆಲೆಯ ಪ್ರತಿ ಷೇರುಗಳಿಗೆ 4.25 ರೂ. ಘೋಷಿಸಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಐಒಸಿಯಲ್ಲಿ ಶೇ 51.50 ರಷ್ಟು ಪಾಲು ಹೊಂದಿರುವ ಸರ್ಕಾರಕ್ಕೆ 2,060 ಕೋಟಿ ರೂ. ಹರಿದು ಹೋಗಲಿದೆ. 'ಲಾಭಾಂಶವನ್ನು ಷೇರುದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಲಾಭಾಂಶದ ಆದೇಶವನ್ನು 2020 ಮಾರ್ಚ್ 31ರಂದು ಅಥವಾ ಅದಕ್ಕೂ ಮೊದಲು ರವಾನಿಸಲಾಗುತ್ತದೆ ಎಂದು ಹೇಳಿದೆ.
ಮಧ್ಯಂತರ ಲಾಭಾಂಶವನ್ನು ಪಾವತಿಸಲು ಷೇರುದಾರರ ಅರ್ಹತೆಯನ್ನು ಕಂಡುಕೊಳ್ಳುವ ಉದ್ದೇಶದಿಂದ ಕಂಪನಿಯ ಆಡಳಿತ ಮಂಡಳಿ, ಮಾರ್ಚ್ 25 ಅನ್ನು 'ದಾಖಲೆ ದಿನಾಂಕ' ಎಂದು ನಿಗದಿಪಡಿಸಿದೆ. ಐಒಸಿಯ ಷೇರುಗಳು ಶುಕ್ರವಾರ ಬಿಎಸ್‌ಇ ವಹಿವಾಟಿನಲ್ಲಿ ಶೇ 4.50ರಷ್ಟು ಏರಿಕೆ ಕಂಡು 91.70 ರೂ. ಮಾರಾಟ ಆದವು.