ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಯನ್ನು ಪ್ರಾರಂಭಿಸಲು ಎಲೆಕ್ಟ್ರಿಕ್ ವೆಹಿಕಲ್ (ಇವಿ) ದೈತ್ಯ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ್ದೇನೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದಿ ರೈಸಿನಾ ಡೈಲಾಗ್ 2021ರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಕಂಪನಿಗೆ ಇದು ಸುವರ್ಣಾವಕಾಶವಾಗಿದೆ ಎಂದರು. ಟೆಸ್ಲಾ ಈಗಾಗಲೇ ಬೆಂಗಳೂರಿನಲ್ಲಿ ಆರ್ & ಡಿ ಕಚೇರಿ ಸ್ಥಾಪನೆಗೆ ಒಲವು ತೋರಿದ್ದು, ಸಿಲಿಕಾನ್ ಸಿಟಿಯಲ್ಲಿ ತನ್ನ ಸಾಗರೋತ್ತರ ಘಟಕ ತೆರೆಯಲಿದೆ.
ಇದನ್ನೂ ಓದಿ: ಎಲ್ಐಸಿ ನೌಕರರಿಗೆ ಸಿಹಿ ಸಮಾಚಾರ: ಊಹಿಸಿದಷ್ಟು ವೇತನ ಹೆಚ್ಚಿಸಿದ ಕೇಂದ್ರ!
ನಾನು ಟೆಸ್ಲಾ ಮ್ಯಾನೇಜ್‌ಮೆಂಟ್‌ನೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೇನೆ. ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಇದು ಒಂದು ಸುವರ್ಣಾವಕಾಶ ಎಂದು ನಾನು ಅವರಿಗೆ ಮನವರಿಕೆ ಮಾಡಿದ್ದೇವೆ. ದೇಶದಲ್ಲಿ ಕೈಗಾರಿಕಾ ಸಮೂಹ ಸ್ಥಾಪಿಸಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಕಂಪನಿಗೆ ಭರವಸೆ ನೀಡಿದ್ದೇನೆ ಎಂದು ಗಡ್ಕರಿ ಹೇಳಿದರು.
ಭಾರತೀಯ ಇವಿ ತಯಾರಕರ ಮೇಲಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಭಾರತೀಯ ಉತ್ಪನ್ನಗಳು ಸಹ ಸುಧಾರಿಸುತ್ತಿವೆ. ಎರಡು ವರ್ಷಗಳಲ್ಲಿ ನಾವು ಟೆಸ್ಲಾ ಗುಣಮಟ್ಟದ ಇ-ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪಡೆಯುತ್ತೇವೆ ಎಂದರು.
ಟೆಸ್ಲಾ ಹಿತದೃಷ್ಟಿಯಿಂದ ಭಾರತದಲ್ಲಿ ಉತ್ಪಾದನೆಯನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನಾನು ಸಲಹೆ ನೀಡಿದ್ದೇನೆ. ಅದು ನಿಮಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.