ಬೆಂಗಳೂರು: ಅದ್ಭುತ ಮನಸ್ಸು, ಉತ್ತಮ ವ್ಯವಹಾರದ ಕುಶಾಗ್ರಮತಿ, ಭಾರತೀಯ ಐಟಿ ಕ್ಷೇತ್ರದ ಪಿತಾಮಹ, ಐಟಿ ಸಂತ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಕನ್ನಡ ನೆಲದಲ್ಲಿ ಜನಿಸಿ ಇಂದಿಗೆ 74ನೇ ವಸಂತಗಳು ಕಳೆದಿವೆ.
ಇನ್ಫೋಸಿಸ್ ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ಮೂರ್ತಿ ಪ್ರವರ್ತಕ ನಾಯಕರಾಗಿ ಭಾರತದ ಐಟಿ ಕ್ಷೇತ್ರಕ್ಕೆ ವಿಶ್ವಪ್ರಸಿದ್ಧ ಬ್ರಾಂಡ್ ತಂದುಕೊಟ್ಟವರು. ಅವರ ಮುಂದಾಳತ್ವದಲ್ಲಿ ಇನ್ಫೋಸಿಸ್ ಭಾರತದ ಎರಡನೇ ಅತಿದೊಡ್ಡ ಐಟಿ ಮತ್ತು ಸೇವಾ ಸಂಸ್ಥೆಯಾಗಿ ಟೆಕ್ಕಿಗಳ ನೆಚ್ಚಿನ ಉದ್ಯೋಗ ಆಕಾಂಕ್ಷೆಯ ಕಂಪನಿಯಾಗಿದೆ.
1946ರ ಆಗಸ್ಟ್ 20 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಜನಿಸಿದ ಅಪ್ರತಿಮ ಉದ್ಯಮಿ, ಇನ್ಫಿಯಿಂದ ನಿವೃತ್ತಿಯಾಗುವ ಮೊದಲು ಅದರ ಅಧ್ಯಕ್ಷರಾಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ), ಮುಖ್ಯ ಮಾರ್ಗದರ್ಶಕರಂತಹ ಅನೇಕ ಕಿರೀಟಗಳನ್ನು ಅಲಂಕರಿಸಿದ್ದರು.
ನಾರಾಯಣ ಮೂರ್ತಿ ಅವರು ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಮುಗಿಸಿದರು. ಇನ್ಫೋಸಿಸ್ ಪ್ರಾರಂಭಿಸುವ ಮೊದಲು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಚೀಫ್ ಸಿಸ್ಟಮ್ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದರು. ಪುಣೆಯ ಪಟ್ನಿ ಕಂಪ್ಯೂಟರ್ ಸಿಸ್ಟಂಸ್‌ನಲ್ಲಿ ಸಹ ಸೇವೆ ಸಲ್ಲಿಸಿದರು.
ಮೂರ್ತಿ ಅವರು ತಮ್ಮ ಜೊತೆಗಿನ ಆರು ಸಾಫ್ಟ್‌ವೇರ್ ವೃತ್ತಿಪರರು ಒಗ್ಗೂಡಿ 1981ರಲ್ಲಿ ಇನ್ಫೋಸಿಸ್ ಅನ್ನು 10,000 ರೂ. ಆರಂಭಿಕ ಬಂಡವಾಳ ಹೂಡಿಕೆಯೊಂದಿಗೆ ಐಟಿ ಕಂಪನಿಗೆ ಅಡಿಪಾಯ ಹಾಕಿದರು. ಈ ಹಣವನ್ನು ಅವರ ಪತ್ನಿ ಸುಧಾಮೂರ್ತಿ ನೀಡಿದ್ದರು. ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ನಿನ್ನೆ 70ನೇ ಜನ್ಮ ದಿನಾಚರಣೆ ಆಚರಿಸಿಕೊಂಡರು. ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್ ಮೂಲಕ ದೀನದಲಿತರಿಗೆ ನೆರವಿನ ಹಸ್ತಚಾಚುವ ಲೋಕೋಪಕಾರಿ ಸೇವೆ ಮಾಡುತ್ತಿದ್ದಾರೆ. ಜೊತೆಗೆ ಸಾಹಿತ್ಯ ಕೃಷಿಯಲ್ಲಿ ಸಹ ತೊಡಿಗಿಸಿಕೊಂಡಿದ್ದಾರೆ.
ಎನ್.ಆರ್. ನಾರಾಯಣ ಮೂರ್ತಿ ಅವರು 1981ರಿಂದ 2002 ರವರೆಗೆ ಇನ್ಫೋಸಿಸ್ ಸಿಇಒ ಮತ್ತು 2002 ರಿಂದ 2011ರವರೆಗೆ ಅಧ್ಯಕ್ಷರಾಗಿದ್ದರು. 2011ರಲ್ಲಿ ಅವರು ಮಂಡಳಿಯಿಂದ ಕೆಳಗಿಳಿದರು. ಜೂನ್ 2013ರಲ್ಲಿ ಮೂರ್ತಿ ಅವರನ್ನು ಐದು ವರ್ಷಗಳ ಅವಧಿಗೆ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಎರಡು ದಶಕಗಳ ಕಾಲ ಭಾರತೀಯ ಐಟಿ ಕ್ಷೇತ್ರವನ್ನು ಉತ್ತುಂಗಕ್ಕೆ ಏರಿಸಿದ ಬಳಿಕ ಇನ್ಫೋಸಿಸ್ ಕಟ್ಟಿ ಬೆಳೆಸಿದ ಕಥೆ ಮತ್ತು ತಾವು ಕಲಿತ ಪಾಠಗಳನ್ನು ಒಳಗೊಂಡ 'ಬೆಟರ್ ಇಂಡಿಯಾ: ಎ ಬೆಟರ್ ವರ್ಲ್ಡ್' ಎಂಬ ಸ್ಪೂರ್ತಿದಾಯಕ ಪುಸ್ತಕ ಬರೆದಿದ್ದಾರೆ. ಭಾರತೀಯ ತಂತ್ರಜ್ಞಾನ ಕ್ಷೇತ್ರಕ್ಕೆ ಮೂರ್ತಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 'ಪದ್ಮವಿಭೂಷಣ' ಮತ್ತು 'ಪದ್ಮಶ್ರೀ' ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.