ಬೆಂಗಳೂರು: ಸಿಲಿಕಾನ್ ಸಿಟಿ ಮೂಲದ ಐಟಿ ಸೇವೆಗಳ ದೈತ್ಯ ಇನ್ಫೋಸಿಸ್, 9,200 ಕೋಟಿ ರೂ.ಗಳಷ್ಟು ಷೇರು ಮರು ಖರೀದಿ ಯೋಜನೆ ಘೋಷಿಸಿದೆ. ಅಂತಿಮ ಲಾಭಾಂಶ (ಡಿವಿಡೆಂಡ್) 6,400 ಕೋಟಿ ರೂ.ನಷ್ಟು ಇರಲಿದೆ.
ಇನ್ಫೋಸಿಸ್ ನಿರ್ದೇಶಕರ ಮಂಡಳಿಯು ಮುಕ್ತ ಮಾರುಕಟ್ಟೆಯಲ್ಲಿ 9,200 ಕೋಟಿ ರೂ. ಷೇರು ಮರು ಖರೀದಿ ಮತ್ತು 6,400 ಕೋಟಿ ರೂ. ಲಾಭಾಂಶ ಸೇರಿ ಒಟ್ಟು 15,600 ಕೋಟಿ ರೂ. ಬಂಡವಾಳ ವಾಪಸಾತಿ ಇರಲಿದೆ. ಕಂಪನಿಯ ಉಚಿತ ಮೀಸಲುಗಳ ಒಟ್ಟು ಶೇ 15ಕ್ಕಿಂತ ಕಡಿಮೆ ಇರುತ್ತದೆ. ಪ್ರತಿ ಈಕ್ವಿಟಿ ಷೇರಿಗೆ ಗರಿಷ್ಠ 1,750 ರೂ. ದರ ನಿಗದಿ ಮಾಡಲಾಗಿದೆ ಎಂದು ಕಂಪನಿ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
ನಮ್ಮ ಬಂಡವಾಳ ಹಂಚಿಕೆ ನೀತಿ ಕಾರ್ಯಗತಗೊಳಿಸುವುದರಿಂದ ಕಂಪನಿಯು ಪ್ರತಿ ಷೇರಿಗೆ ಒಟ್ಟು ಲಾಭಾಂಶ ಹಿಂದಿನ ವರ್ಷಕ್ಕಿಂತ ಶೇ 54ರಷ್ಟು ಹೆಚ್ಚಿಸಲು ಮತ್ತು ಈಕ್ವಿಟಿ ಷೇರುಗಳನ್ನು 9,200 ಕೋಟಿ ರೂ.ವರೆಗೆ ಮರುಖರೀದಿ ಮಾಡಲು ಪ್ರಸ್ತಾಪಿಸಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ನೀಲಂಜನ್ ರಾಯ್ ಹೇಳಿದರು.
ಕಳೆದ ಅಕ್ಟೋಬರ್‌ನಲ್ಲಿ ಕಂಪನಿಯು ಪ್ರತಿ ಷೇರಿನ ಮಧ್ಯಂತರ ಲಾಭಾಂಶವನ್ನು 12 ರೂ. ಎಂದು ಘೋಷಿಸಿತ್ತು. ಇತ್ತೀಚಿನ ಪ್ರಕಟಣೆಯೊಂದಿಗೆ 2020-21ರ ಅವಧಿಯಲ್ಲಿ ಪ್ರತಿ ಷೇರಿಗೆ ಒಟ್ಟು ಲಾಭಾಂಶವು ಪ್ರತಿ ಷೇರಿಗೆ 27 ರೂ.ಗಳಷ್ಟಿದೆ.
ಪ್ರತಿ ಷೇರಿಗೆ 1,750 ರೂ.ಗಿಂತ ಹೆಚ್ಚಿಲ್ಲದ ಬೆಲೆಯಲ್ಲಿ ಷೇರು ಮರುಖರೀದಿ ಯೋಜನೆಯನ್ನು ಕಂಪನಿ ಪ್ರಕಟಿಸಿದೆ. ಈ ಯೋಜನೆಯು ವಾರ್ಷಿಕ ಸಾಮಾನ್ಯ ಸಭೆಯ (ಎಜಿಎಂ) ಅನುಮೋದನೆಗೆ ಒಳಪಟ್ಟಿರುತ್ತದೆ.
ಈಕ್ವಿಟಿ ಷೇರುಗಳ ಮರುಖರೀದಿಯು ಮುಕ್ತ ಮಾರುಕಟ್ಟೆ ಮಾರ್ಗದಿಂದ ಭಾರತೀಯ ಷೇರು ವಿನಿಮಯ ಕೇಂದ್ರಗಳ ಮೂಲಕ 9,200 ಕೋಟಿ ರೂ.ಗಳಷ್ಟಿದೆ. ಪ್ರತಿ ಷೇರಿಗೆ ಗರಿಷ್ಠ 1,750 ರೂ. (ಗರಿಷ್ಠ ಬೈಬ್ಯಾಕ್ ಬೆಲೆ) ಇರಲಿದೆ ಎಂದಿದೆ.
4ನೇ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ 17.5ರಷ್ಟು ಬೆಳವಣಿಗೆ
2020ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 4,321 ಕೋಟಿ ರೂ.ಯಷ್ಟಾಗಿದೆ. 2021ರ ಮಾರ್ಚ್ ತ್ರೈಮಾಸಿಕದಲ್ಲಿ ಇದರ ಆದಾಯವು ಶೇ 13.1ರಷ್ಟು ಏರಿಕೆಯಾಗಿ 26,311 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ಅವಧಿಯಲ್ಲಿ ಇದು 23,267 ಕೋಟಿ ರೂ.ಗಳಷ್ಟಿತ್ತು.
2021ರ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭವು ಶೇ 16.6ರಷ್ಟು ಏರಿಕೆಯಾಗಿ 19,351 ಕೋಟಿ ರೂ.ಗೆ ತಲುಪಿದೆ. ಆದಾಯವು ಶೇ 10.7ರಷ್ಟು ಹೆಚ್ಚಳವಾಗಿ 1,00,472 ಕೋಟಿ ರೂ.ಯಷ್ಟಿದೆ. ಈಗಿನ ಆರ್ಥಿಕ ವರ್ಷದಲ್ಲಿ ಆದಾಯವು ಸ್ಥಿರ ಕರೆನ್ಸಿ ದರದಲ್ಲಿ ಶೇ 12-14ರಷ್ಟು ಬೆಳೆಯಲಿದೆ ಎಂದು ಇನ್ಫೋಸಿಸ್ ನಿರೀಕ್ಷೆ ಇರಿಸಿಕೊಂಡಿದೆ.