ನವದೆಹಲಿ: ದೇಶದ ರಾಜಕೀಯ ಶಕ್ತಿಕೇಂದ್ರ ಸಂಸತ್ ಭವನದಿಂದ ಹಿಡಿದು ಇಂಡಿಯಾ ಗೇಟ್ವರೆಗಿನ ಪ್ರದೇಶದ ಮರುಯೋಜನೆ ಹಾಗೂ ಮರು ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ಗುಜರಾತ್ನ ಅಹಮದಾಬಾದ್ ಮೂಲದ ಎಚ್‌ಸಿಪಿ ವಿನ್ಯಾಸ ಯೋಜನಾ ಕಂಪನಿಯ ಪಡೆದುಕೊಂಡಿದೆ.
ಎಡ್ವಿನ್ ಲುಟೆನ್ಸ್ ವಿನ್ಯಾಸಗೊಳಿಸಿರುವ ಈ ಆಕರ್ಷಕ 3 ಕಿ.ಮೀ. ಪ್ರದೇಶದ ಮರು ಅಭಿವೃದ್ಧಿಯ ಬೃಹತ್ ಯೋಜನೆಯ ಪ್ರಕಾರ ಪ್ರಸ್ತುತ ಇರುವ ಸಂಸತ್ ಭವನದ ಪಕ್ಕದಲ್ಲಿ ನೂತನ ಸಂಸತ್ ಭವನ ನಿರ್ಮಾಣ ಆಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯದ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳನ್ನು ಒಂದೇ ಕಡೆ ಬೃಹತ್ ಕಟ್ಟಡದಲ್ಲಿ ನಿರ್ಮಾಣಕ್ಕೆ ಕೇಂದ್ರ ಮೆಗಾ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ ಈ ಪ್ರದೇಶದ ಅಭಿವೃದ್ಧಿಗೆ ಬಿಡ್ ಆಹ್ವಾನಿಸಿತ್ತು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಐದಕ್ಕೂ ಅಧಿಕ ಭಾರತೀಯ ವಾಸ್ತುಶಿಲ್ಪ ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಮೋದಿ ತವರು ಕಂಪನಿ ಆಯ್ಕೆ ಆಗಿದೆ.
ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ ಮಾತನಾಡಿ, ಎಚ್‌ಸಿಪಿ ವಿನ್ಯಾಸವು ನಾವು ನಿಗದಿ ಮಾಡಿದ್ದ ಅಂದಾಜು ₹ 448 ಕೋಟಿ ರೂ. ಕಾಮಗಾರಿ ಗುತ್ತಿಗೆ ಮೊತ್ತಕ್ಕೆ ಪ್ರತಿಯಾಗಿ 229.7 ಕೋಟಿ ರೂ.ಯಷ್ಟು ಬಿಡ್ ಸಲ್ಲಿಸಿತ್ತು. ಸಲಹಾ ವೆಚ್ಚವು ಸಾಮಾನ್ಯ ಯೋಜನಾ ಒಟ್ಟು ವೆಚ್ಚದ ಮೂರರಿಂದ ಐದು ಪ್ರತಿಶತವಾಗಿರಲಿದೆ ಎಂದು ಒಟ್ಟು ಅಂಕಿ -ಅಂಶಗಳನ್ನು ಬಹಿರಂಗಪಡಿಸಲು ಪುರಿ ನಿರಾಕರಿಸಿದರು.
ಈ ತಿಂಗಳ ಆರಂಭದಲ್ಲಿ ಲೋಕಸಭಾ ಸಚಿವಾಲಯವು ಸಂಸತ್ತಿನ ಕಟ್ಟಡದ ಪ್ರಸ್ತುತ ರಚನೆಯಲ್ಲಿ ಅಗತ್ಯವಾದ ಬದಲಾವಣೆಗಳು ಮತ್ತು ಹೊಸ ಸಂಕೀರ್ಣ ಹೊಂದಿರಬೇಕಾದ ವೈಶಿಷ್ಟ್ಯಗಳ ಕುರಿತು ಸಂಸದರಿಂದ ಸಲಹೆಗಳನ್ನು ಕೋರಿತ್ತು.
ವಿಶೇಷ ವಾಸ್ತುಶೈಲಿ ಹೊಂದಿರುವ ಹಾಲಿ ಸಂಸತ್ ಭವನ 1921ರಲ್ಲಿ ಎಡ್ವಿನ್ ಲ್ಯೂಟನ್ಸ್ ಹಾಗೂ ಹರ್ಬಟ್ ಬೇಕರ್ ಅವರು ವಿನ್ಯಾಸಗೊಳಿಸಿದ್ದ 6 ವರ್ಷಗಳ ಬಳಿಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತ್ತು. ಸುಮಾರು 90 ವರ್ಷಗಳಷ್ಟು ಹಳೆಯದಾದ ಸಂಸತ್ ಭವನವನ್ನು ನವೀಕರಿಸಲು ಕೇಂದ್ರ ನಿರ್ಧರಿಸಿದೆ. ಹೊಸದಾಗಿ ಸಂಸತ್ ಭವನ ನಿರ್ಮಾಣ ಮಾಡಬೇಕೆಂದು ತುಂಬ ದಿನಗಳಿಂದ ಒತ್ತಾಯ ಕೇಳಿ ಬರುತ್ತಿತ್ತು. ಯುಪಿಎ ಆಡಳಿತಾವಧಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಂದಿನ ಲೋಕಸಭೆ ಸ್ಪೀಕರ್ ಮೀರಾಕುಮಾರ್ ಅವರು ಉನ್ನತಾಧಿಕಾರದ ಸಮಿತಿ ರಚಿಸಿದ್ದರು.