ನವದೆಹಲಿ: ಉಡಾನ್ ಯೋಜನೆಯ ಭಾಗವಾಗಿ ದೇಶಿ ವಿಮಾನ ಸೇವೆಯಲ್ಲಿ ಹುಬ್ಬಳಿ ಹಾಗೂ ಉತ್ತರ ಪ್ರದೇಶದ ಹಿಂಡನ್ ನಡುವೆ ನೇರ ವಾಣಿಜ್ಯ ವಿಮಾನ ಹಾರಾಟ ಸೇವೆ ಆರಂಭವಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯಿಂದ 50 ಕಿ.ಮೀ. ದೂರದಲ್ಲಿ ಇರುವ ಗಾಜಿಯಾಬಾದ್ ಹಿಂಡನ್ ವಿಮಾನ ನಿಲ್ದಾಣವು ತನ್ನ ವಾಣಿಜ್ಯ ಹಾರಾಟ ಸೇವೆಯನ್ನು ನವೆಂಬರ್ 6 ರಿಂದ ಆರಂಭಿಸಿದೆ. ಸ್ಟಾರ್ ಏರ್ ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ಹಿಂಡನ್ ನಡುವೆ ತಡೆರಹಿತ ವಿಮಾನ ಹಾರಾಟ ಸೇವೆ ಆರಂಭಿಸಿದೆ. ಈ ಎರಡು ತಾಣಗಳ ನಡುವೆ ಸ್ಟಾರ್ ಏರ್ ವಾರಕ್ಕೆ 3 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ಏಕಮುಖಿ ಮಾರ್ಗವಾಗಿ ₹ 3,699 ಟಿಕೆಟ್ ಬುಕಿಂಗ್ ಅನ್ನು ವಿಮಾನಯಾನ ಸಂಸ್ಥೆ ಪ್ರಾರಂಭಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.05ಕ್ಕೆ ಹೊರಟು ಫ್ಲೈಟ್ ಮಧ್ಯಾಹ್ನ 3.45ಕ್ಕೆ ಹಿಂಡನ್ ವಿಮಾನ ನಿಲ್ದಾಣ ತಲುಪಲಿದೆ. ಹಿಂಡನ್ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ವಿಮಾನವು ಸಂಜೆ 4.10ಕ್ಕೆ ಹೊರಟು ಸಂಜೆ 6.50ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಈ ವಿಮಾನಗಳು ಬುಧವಾರ ಮತ್ತು ಗುರುವಾರ ಸೇವೆಗೆ ಲಭ್ಯವಿರುವುದಿಲ್ಲ.
ಶನಿವಾರ ಹುಬ್ಬಳ್ಳಿಯಿಂದ ಸ್ಟಾರ್ ಏರ್ ವಿಮಾನ ಬೆಳಗ್ಗೆ 11.50ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹಿಂಡನ್ ವಿಮಾನ ನಿಲ್ದಾಣವನ್ನು ತಲುಪಲಿದೆ. ಸ್ಟಾರ್ ಏರ್ ವಿಮಾನವು ಮಧ್ಯಾಹ್ನ 3 ಗಂಟೆಗೆ ಹಿಂಡನ್ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 5.40ಕ್ಕೆ ಹುಬ್ಬಳ್ಳಿಗೆ ಬಂದು ಸೇರಲಿದೆ.