ಪ್ಯಾರಿಸ್: ಮುಂದಿನ ಮೂರು ವರ್ಷಗಳಲ್ಲಿ 2 ಬಿಲಿಯನ್ ಯುರೋ ವೆಚ್ಚ ಕಡಿತ ಯೋಜನೆಯ ಭಾಗವಾಗಿ ಫ್ರೆಂಚ್ ಕಾರು ತಯಾರಕ ರೆನಾಲ್ಟ್ ವಿಶ್ವದಾದ್ಯಂತ 15,000 ಉದ್ಯೋಗ ಕಡಿತಗೊಳಿಸುವುದಾಗಿ ಘೋಷಿಸಿದೆ.
ತವರು ನೆಲದಿಂದ 4,600 ಹಾಗೂ ವಿಶ್ವದ ಇತರ ಭಾಗಗಳಿಂದ 10,000 ಕ್ಕಿಂತಲೂ ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು ಎಂದು ರೆನಾಲ್ಟ್ ಪ್ರಕಟಣೆಯಲ್ಲಿ ಹೇಳಿದೆ.
ಜಾಗತಿಕ ಉತ್ಪಾದನಾ ಸಾಮರ್ಥ್ಯವನ್ನು 2019ರಲ್ಲಿ 4 ಮಿಲಿಯನ್ ವಾಹನಗಳಿಂದ 2024ರ ವೇಳೆಗೆ 3.3 ಮಿಲಿಯನ್‌ಗೆ ಪರಿಷ್ಕರಿಸಲಾಗುವುದು. ವಿವಿಧ ಪ್ಲಾಂಟ್ಗಳು ಎದುರಿಸುತ್ತಿರುವ ತೊಂದರೆ, ವಾಹನ ಉದ್ಯಮದ ಮುಂದಿರುವ ಪ್ರಮುಖ ಬಿಕ್ಕಟ್ಟು ಮತ್ತು ಪರಿಸರ ಪರಿವರ್ತನೆಯ ತುರ್ತು ಬದಲಾವಣೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.
ಕಂಪನಿಯ ಸುಸ್ಥಿರತೆ ಮತ್ತು ದೀರ್ಘಾವಧಿಯಲ್ಲಿ ಅದರ ಅಭಿವೃದ್ಧಿಯನ್ನ ಖಚಿತಪಡಿಸಿಕೊಳ್ಳಲು ಯೋಜಿತ ಬದಲಾವಣೆಗಳು ಅಗತ್ಯವಾಗಿದೆ. ವಿಶ್ವಾದ್ಯಂತ 1,80,000 ಕಾರ್ಮಿಕರನ್ನು ನೇಮಿಸಿಕೊಂಡಿದ್ದೇವೆ. ಮೊರಾಕ್ಕೋ ಮತ್ತು ರೊಮೇನಿಯಾದಲ್ಲಿ ಯೋಜಿತ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ರೆನಾಲ್ಟ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಜೀನ್ ಡೊಮಿನಿಕ್ ಸೆನಾರ್ಡ್ ಹೇಳಿದರು.
ರಷ್ಯಾದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯದ ಹೊಂದಾಣಿಕೆಯತ್ತ ದೃಷ್ಟಿನೆಟ್ಟಿದೆ. ಚೀನಾದಲ್ಲಿ ರೆನಾಲ್ಟ್ ಬ್ರಾಂಡ್ನ ಇಂಧನ ಚಾಲಿತ ಕಾರು ಚಟುವಟಿಕೆಗಳನ್ನು ನಿಲ್ಲಿಸುವುದಾಗಿ ಘೋಷಿಸಿತ್ತು.