ನವದೆಹಲಿ: ಪ್ರಸಿದ್ಧ ಫೋರ್ಬ್ಸ್ ನಿಯತಕಾಲಿಕವು ಭಾರತದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದ್ದು, ಉದ್ಯಮಿ- ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ 12ನೇ ವರ್ಷವೂ ನಂ.1 ಶ್ರೀಮಂತ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಫೋರ್ಬ್ಸ್ ಹೊರಡಿಸಿದ ಭಾರತದ ಶ್ರೀಮಂತರ ಸಾಲಿನಲ್ಲಿ ಮುಖೇಶ್ ಅವರು 3.64 ಲಕ್ಷ ಕೋಟಿ ರೂ. (51.4 ಬಿಲಿಯನ್ ಡಾಲರ್) ಮೌಲ್ಯದ ಸಂಪತ್ತಿನ ಮೂಲಕ 12ನೇ ವರ್ಷವೂ ಮೊದಲ ಸ್ಥಾನದಲ್ಲಿದ್ದಾರೆ. ಅವರ ಸಂಪತ್ತಿಗೆ ಹೊಸದಾಗಿ 4.1 ಶತಕೋಟಿ ಹಣ ಸೇರ್ಪಡೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೂರು ವರ್ಷಗಳ ಹಿಂದೆಯಷ್ಟೇ ಟೆಲಿಕಾಂ ಘಟಕವಾದ ಜಿಯೋ ನೆಟ್ವರ್ಕ್ ಸೇವೆ ಆರಂಭಿಸಿ 340 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಪ್ರಸ್ತುತ ಇದು ಭಾರತದ ಅತಿದೊಡ್ಡ ಮೊಬೈಲ್ ವಾಹಕಗಳಲ್ಲಿ ಒಂದಾಗಿದೆ. ಇದುವೇ ಅವರ ಸಂಪತ್ತು ಹೆಚ್ಚಳವಾಗಲು ಮೂಲ ಕಾರಣವೆಂದು ಎಂದು ಫೋರ್ಬ್ಸ್ ಹೇಳಿದೆ.
ಆರ್ಥಿಕ ಮಂದಗತಿಯ ಕಾರಣದಿಂದಾಗಿ ರಾಷ್ಟ್ರದ ಶ್ರೀಮಂತರಿಗೆ ಸವಾಲಿನ ವರ್ಷವಾಗಿದೆ. 2019ರ ಪಟ್ಟಿಯಲ್ಲಿರುವ ಉದ್ಯಮಿಗಳ ಒಟ್ಟು ಸಂಪತ್ತಿನಲ್ಲಿ ಶೇ 8ರಷ್ಟು ಕುಸಿತ ಕಂಡುಬಂದಿದ್ದು, 452 ಬಿಲಿಯನ್ ಡಾಲರ್ನಷ್ಟು ಸಂಪತ್ತು ಕರಗಿದೆ ಎಂದು ತಿಳಿಸಿದೆ.
ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರು 1.11 ಲಕ್ಷ ಕೋಟಿ ರೂ. (15.7 ಬಿಲಿಯನ್ ಡಾಲರ್) ಸಂಪತ್ತಿನ ಮುಖೇನ ಎರಡನೇ ಸ್ಥಾನದಲ್ಲಿದ್ದಾರೆ. ವಿಪ್ರೋ ಮುಖ್ಯಸ್ಥರಾಗಿದ್ದು ತಮ್ಮ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ ಅಜೀಂ ಪ್ರೇಮ್ ಜೀ ಅವರು ಕಳೆದ ವರ್ಷ 2ನೇ ಸ್ಥಾನದಿಂದ ಈಗ 17ನೇ ಸ್ಥಾನಕ್ಕೆ ತಲುಪಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.
ಅಂಬಾನಿ ಮತ್ತು ಅದಾನಿಯ ಬಳಿಕದ ಸ್ಥಾನದಲ್ಲಿ ಅಶೋಕ್ ಲೇಲ್ಯಾಂಡ್ ಮಾಲೀಕರಾದ ಹಿಂದೂಜಾ ಸಹೋದರರು, ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಪಲ್ಲೊಂಜಿ ಮಿಸ್ತ್ರಿ, ಕೋಟಕ್ ಮಹೀಂದ್ರಾ ಬ್ಯಾಂಕ್ನ ಉದಯ್ ಕೋಟಕ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡರ್ ಮೊದಲ ಬಾರಿಗೆ ಟಾಪ್ ಐದರ ಒಳಗೆ ಸ್ಥಾನ ಪಡೆದಿದ್ದಾರೆ.