ಬೆಂಗಳೂರು: ಇ- ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಕಂಪನಿಯು ದೇಶಾದ್ಯಂತ 700 ನಗರಗಳಲ್ಲಿನ 27 ಸಾವಿರ ಕಿರಾಣಗಳನ್ನು ತನ್ನ ಪೂರೈಕೆ ಜಾಲದೊಂದಿಗೆ ಸೇರ್ಪಡೆ ಮಾಡಿಕೊಂಡಿದೆ.
ಮುಂದೆ ಬರಲಿರುವ ಸಾಲು- ಸಾಲು ಹಬ್ಬಗಳ ಬಿಗ್ ಬಿಲಿಯನ್ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ತಲುಪಲು ಫ್ಲಿಪ್ಕಾರ್ಟ್ ಕಿರಾಣಗಳ ಸೇರ್ಪಡೆಗೆ ಮುಂದಾಗಿದೆ. ಪ್ರಸ್ತುತ ಇರುವ 160 ಮಿಲಿಯನ್ ಗ್ರಾಹಕರಿಗೆ ವ್ಯಕ್ತಿಗತವಾದ ಇ- ಕಾಮರ್ಸ್ ಅನುಭವದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಹೊಸ- ಹೊಸ ಪ್ರದೇಶಗಳ ಗ್ರಾಹಕರನ್ನು ತಲುಪುವ ಮಹತ್ವಕಾಂಕ್ಷೆಯನ್ನು ಇರಿಸಿಕೊಂಡಿದೆ. ಶೇ 100ರಷ್ಟು ಪಿನ್ ಕೋಡ್ ಹೊಂದಿರುವ ಪ್ರದೇಶಗಳ ಗ್ರಾಹಕರನ್ನು ತಲುಪಲು ಕಿರಾಣಗಳು ನೆರವಾಗಲಿವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಕಿರಾಣಗಳನ್ನು ಪೂರೈಕೆ ಜಾಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರು ತಿಂಗಳ ಹಿಂದೆ ಆರಂಭಗೊಂಡಿತ್ತು. ದೊಡ್ಡ ಮಟ್ಟದಲ್ಲಿ ಹಬ್ಬದ ಸೀಸನ್ ಬರುತ್ತಿರುವ ಹಿನ್ನೆಲೆಯಲ್ಲಿ ಮಾರಾಟ ಮತ್ತು ವಿತರಣಾ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡುವುದು ಹಾಗೂ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ ಎಂದು ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
ದೇಶಾದ್ಯಂತ ಮೂಲೆ- ಮೂಲೆಗಳಿಂದ ಗ್ರಾಹಕರ ಬೇಡಿಕೆ ಬರುತ್ತಿದ್ದು, ನಮ್ಮ ಕಿರಾಣ ಪಾಲುದಾರರು ಕೂಡ ವ್ಯವಹಾರ ವಿಸ್ತರಣೆಯ ಪಾಲುದಾರರು ಆಗಲಿದ್ದಾರೆ. ಮೃದು ಸಂವಾಹನ ಕೌಶಲ್ಯ ನಿರ್ವಹಣೆ, ಗ್ರಾಹಕರ ವಿಚಾರಣೆಗಳನ್ನು ನಿಭಾಯಿಸುವ ಕುರಿತು ಕಿರಾಣ ಪಾಲುದಾರರಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.