ನವದೆಹಲಿ: ವಸೂಲಾಗದ ಸಾಲದ ಪ್ರಮಾಣ ಏರಿಕೆಯಿಂದ ಹಣಕಾಸು ಬಿಕ್ಕಟ್ಟಿಗೆ ಸಿಲುಕಿ ಆರ್ಬಿಐನ ವಹಿವಾಟು ನಿರ್ಬಂಧಕ್ಕೆ ಒಳಗಾಗಿದ್ದ ಯೆಸ್ ಬ್ಯಾಂಕ್ ವ್ಯವಹಾರಗಳು ಮಾರ್ಚ್ 18ರಿಂದ ಮತ್ತೆ ಈ ಮೊದಲಿನಂತೆ ಶುರುವಾಗಲಿವೆ ಎಂದು ಬ್ಯಾಂಕ್ ತಿಳಿಸಿದೆ.
ಕಳೆದ ವಾರ ಯೆಸ್ ಬ್ಯಾಂಕ್ ತೀವ್ರ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿತ್ತು. ಜೊತೆಗೆ ಗ್ರಾಹಕರಿಗೆ ಗರಿಷ್ಠ ವಿತ್ಡ್ರಾ ಮಿತಿಯನ್ನು ₹ 50,000ಕ್ಕೆ ನಿಗದಿಪಡಿತ್ತು. ಇದರಿಂದ ಗ್ರಾಹಕರು ತಮಗೆ ಅಗತ್ಯವಾದಷ್ಟು ಹಣ ಪಡೆಯಲು ಪರದಾಡಿದರು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಆರ್ಬಿಐ, ಯೆಸ್ ಬ್ಯಾಂಕ್ ಪುನಶ್ಚೇತನ ಕರುಡು ನೀತಿಯೊಂದನ್ನು ಜಾರಿಗೆ ತಂದಿತ್ತು. ಈ ವೇಳೆ, ಸಹಾಯಕ್ಕೆ ಬಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಯೆಸ್ ಬ್ಯಾಂಕ್ನ ಪ್ರತಿ ಷೇರಿಗೆ 10 ರೂ. ದರದಲ್ಲಿ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಿತ್ತು. ಐಸಿಐಸಿಐ ಬ್ಯಾಂಕ್ ಷೇರು ಖರೀದಿಸಿ ಬಂಡವಾಳದ ನೆರವು ನೀಡಿತ್ತು.
ನಿರ್ಬಂಧ ತೆರವಿನ ಬಗ್ಗೆ ಯೆಸ್ ಬ್ಯಾಂಕ್ ಟ್ವೀಟ್ ಮಾಡಿದ್ದು, ಮಾರ್ಚ್ 18ರಿಂದ ನಮ್ಮ ಬ್ಯಾಂಕಿಂಗ್ ಸೇವೆಗಳು ಮತ್ತೆ ಆರಂಭವಾಗಲಿವೆ. ಮಾ.19ರಿಂದ ಗ್ರಾಹಕರು ವ್ಯವಹಾರ ನಡೆಸಬಹುದಾಗಿದೆ. ಆನ್ಲೈನ್ ಬ್ಯಾಂಕಿಂಗ್ ಸೇವೆ ಸೇರಿ ಎಲ್ಲ ಡಿಜಿಟಲ್ ಸೇವೆಗಳು ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದೆ.