ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮಧ್ಯೆಯು ಭಾರತದ ಅತಿದೊಡ್ಡ ವಿಮಾನಯಾನ ಇಂಡಿಗೊ, ತನ್ನ ಸಿಬ್ಬಂದಿಯ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ.
ವಿಮಾನಯಾನ ಕ್ಷೇತ್ರವು ಕೋವಿಡ್-19ನಿಂದ ತೀವ್ರ ಹೊಡೆತಕ್ಕೊಳಗಾಗಿದೆ. ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ರದ್ದುಗೊಳಿಸಿವೆ ಮತ್ತು ನೌಕರರಿಗೆ ವೇತನ ಕಡಿತ ಘೋಷಿಸಿವೆ.
ಸಾಧ್ಯವಿರುವ ಎಲ್ಲಾ ಪರಿಸ್ಥಿತಿಗಳನ್ನು ಎಚ್ಚರಿಕೆಯಿಂದ ನಿರ್ಣಯಿಸಿದ ಬಳಿಕ ಪರಿಶೀಲನೆಗೆ ಒಳಪಡಿಸಿ, ಶೇ.10ರಷ್ಟು ಉದ್ಯೋಗಿಗಳಿಗೆ ಕೊಕ್ ನೀಡಬೇಕಿದೆ. ಇದೊಂದು ನೋವಿನ ನಿರ್ಧಾರ ಎಂದು ಸಂಸ್ಥೆಯ ಸಿಇಒ ರೊನೋಜಾಯ್ ದತ್ತಾ ಹೇಳಿದರು.
ಕೇವಲ 6 ತಿಂಗಳ ಹಿಂದೆ ನಮ್ಮನ್ನು ನಾವು ರೂಪಿಸಿಕೊಂಡ ಆಶಾವಾದಿ ಬೆಳವಣಿಗೆಯ ಹಾದಿಯ ಒಂದು ದುರದೃಷ್ಟಕರ ತಿರುವು. ಆದರೆ, ಈ ಸಾಂಕ್ರಾಮಿಕವು ನಮ್ಮ ಅತ್ಯುತ್ತಮ ಯೋಜನೆಗಳನ್ನು ಮರುಮೌಲ್ಯಮಾಪನ ಮಾಡಲು ನೂಕುತ್ತಿದೆ ಎಂದರು.
ನಾವು ವೇತನ ಕಡಿತ, ವೇತನರಹಿತ ರಜೆ ಮತ್ತು ಇತರ ಹಲವು ವೆಚ್ಚ ನಿರ್ವಹಣೆಯಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ, ದುರದೃಷ್ಟವಶಾತ್ ಈ ವೆಚ್ಚ ಉಳಿತಾಯವು ಆದಾಯದ ಕುಸಿತವನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ದತ್ತಾ ಅವರು ಹೇಳಿದರು.