ನವದೆಹಲಿ: ದೇಶದಲ್ಲಿ ಫಿಜರ್ / ಬಯೋಟೆಕ್ ಲಸಿಕೆ ಲಭ್ಯತೆ ಅವಕಾಶಗಳನ್ನು ಶೋಧಿಸಲು ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲು ತಾನು ಬದ್ಧವೆಂದು ಜಾಗತಿಕ ಫಾರ್ಮಾ ದೈತ್ಯ ಫಿಜರ್ ಹೇಳಿದೆ.
ಕೋವಿಡ್-19 ಸೋಂಕು ವಿರುದ್ಧ ಫಿಜರ್ / ಬಯೋಟೆಕ್ ಲಸಿಕೆ ಅನುಮೋದಿಸಿದ ಮೊದಲ ದೇಶ ಇಂಗ್ಲೆಂಡ್ ಆಗಿದೆ. ಯುಕೆ ರೆಗ್ಯುಲೇಟರ್ ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ), ಲಸಿಕೆಯ ತುರ್ತು ಬಳಕೆಗೆ ತಾತ್ಕಾಲಿಕ ಅನುಮತಿಸಿದೆ.
ಲಸಿಕೆ ಲಭ್ಯತೆ ಅನ್ವೇಷಣೆಯ ಕುರಿತು ಜಗತ್ತಿನ ಅನೇಕ ಸರ್ಕಾರಗಳ ಜತೆಗೆ ಈಗಾಗಲೇ ಚರ್ಚೆ ನಡೆಸುತ್ತಿದ್ದೇವೆ. ಭಾರತ ಸರ್ಕಾರದೊಂದಿಗೂ ತೊಡಗಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಈ ಲಸಿಕೆಯನ್ನು ದೇಶದಲ್ಲಿ ಬಳಕೆಗೆ ಲಭ್ಯವಾಗುವಂತೆ ಮಾಡುವ ಅವಕಾಶಗಳನ್ನು ಶೋಧಿಸುತ್ತಿದ್ದೇವೆ ಎಂದು ಫಿಜರ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತಕ್ಕೆ 'ಕೊರೊನಾ ಮಾಫಿಯಾ'ದ ಎಚ್ಚರಿಕೆ ಕೊಟ್ಟ ಇಂಟರ್ಪೋಲ್: ಹೇಗಿರಲಿವೆ ದುಷ್ಕೃತ್ಯಗಳು?
ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗುವಂತಹ ಅವಕಾಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಫಿಜರ್ ಬದ್ಧವಾಗಿದೆ. ಸರ್ಕಾರಗಳೊಂದಿಗೆ ನಾವು ಬಹು ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅಭಯ ನೀಡಿದ್ದಾರೆ.
ಸಾಂಕ್ರಾಮಿಕ ರೋಗದ ಹಂತದಲ್ಲಿ ಫಿಜರ್, ತನ್ನ ಲಸಿಕೆಯನ್ನು ಆಯಾ ಸರ್ಕಾರಿ ಅಧಿಕಾರಿಗಳ ಜೊತೆಗಿನ ಒಪ್ಪಂದಗಳ ಆಧಾರದ ಮೇಲೆ ಮತ್ತು ನಿಯಂತ್ರಕ ಅಧಿಕಾರ ಅಥವಾ ಅನುಮೋದನೆ ಅನುಸರಿಸಿ ಕರಾರುಗಳ ಮೂಲಕ ಪೂರೈಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್-19 ಎಂಆರ್ಎನ್ಎ (mRNA) ಲಸಿಕೆಯ ತುರ್ತು ಬಳಕೆಗಾಗಿ ಬ್ರಿಟನ್ ನಿಯಂತ್ರಕ, ಎಂಎಚ್‌ಆರ್‌ಎ ತಾತ್ಕಾಲಿಕ ಅನುಮತಿ ನೀಡಿದೆ. 'ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಲಸಿಕೆಯ ವಿಶ್ವಾದ್ಯಂತ 3ನೇ ಹಂತದ ಪ್ರಯೋಗದ ಬಳಿಕ, ಮೊದಲ ತುರ್ತು ಉಪಯೋಗದ ಅಧಿಕಾರ ಪಡೆದಿದೆ' ಎಂದು ಫಿಜರ್ ತಿಳಿಸಿದೆ.
ನಾವು ಹೆಚ್ಚಿನ ಅಧಿಕಾರ ಮತ್ತು ಅನುಮೋದನೆಗಳನ್ನು ನಿರೀಕ್ಷಿಸುತ್ತಿದ್ದು, ವಿಶ್ವದಾದ್ಯಂತ ಉತ್ತಮ ಗುಣಮಟ್ಟದ ಲಸಿಕೆಯನ್ನು ಸುರಕ್ಷಿತವಾಗಿ ಪೂರೈಸಲು ತುರ್ತುಸ್ಥಿತಿಯೊಂದಿಗೆ ಮುನ್ನುಗ್ಗುವತ್ತ ಗಮನ ಹರಿಸಿದ್ದೇವೆ ಎಂದು ಫಿಜರ್ ಅಧ್ಯಕ್ಷ/ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ ಬುಧವಾರ ಹೇಳಿದ್ದಾರೆ.
ನವೆಂಬರ್‌ನಲ್ಲಿ ಕೋವಿಡ್-19 ಕುರಿತು ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥರಾದ ನೀತಿ ಆಯೋಗದ ಸದಸ್ಯ ವಿ ಕೆ ಪಾಲ್ ಅವರು, ದೇಶದಲ್ಲಿ ಫಿಜರ್ ಲಸಿಕೆ ಆಗಮನಕ್ಕೆ ಕೆಲವು ತಿಂಗಳು ತೆಗೆದುಕೊಳ್ಳಬಹುದು. ಫಿಜರ್ ಅಭಿವೃದ್ಧಿಪಡಿಸಿದ ಲಸಿಕೆ ಮೈನಸ್ 70 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲು ಕೋಲ್ಡ್-ಚೈನ್ಗಳ ವ್ಯವಸ್ಥೆ ಒಂದು ದೊಡ್ಡ ಸವಾಲಾಗಿದೆ. ಅದು ಯಾವುದೇ ರಾಷ್ಟ್ರಕ್ಕೆ ಸುಲಭವಲ್ಲ. ಆದರೆ, ಅದನ್ನು ಪಡೆಯಬೇಕಾದರೆ ನಾವು ನಾವು ಏನು ಮಾಡಬೇಕೆಂದು ಪರಿಶೀಲಿಸುತ್ತಿದ್ದೇವೆ. ಅದಕ್ಕಾಗಿ ಕಾರ್ಯತಂತ್ರ ರೂಪಿಸುತ್ತೇವೆ ಎಂದು ಹೇಳಿದ್ದರು.
ಬೌರ್ಲಾ ಹಾಗೂ ಪಾಲ್ ಅವರ ಹೇಳಿಕೆ ಗಮನಿಸಿದರೆ, ಫಿಜರ್ ಮತ್ತು ಭಾರತ ಸರ್ಕಾರ ಜೊತೆಗೂಡಿ ಲಸಿಕೆಯ ಲಭ್ಯತೆಯ ಮಾರ್ಗಗಳನ್ನು ಅನ್ವೇಷಿಸಲಿದೆ. ಸಂಗ್ರಹ ಸಂಬಂಧಿತ ಎದಿದ್ದ ಪ್ರಶ್ನೆಗಳು ನಿವಾರಣೆ ಆಗಬಹುದು ಎಂಬುದನ್ನು ನಿರೀಕ್ಷಿಸಬಹುದು.