ಬೆಂಗಳೂರು: ನೇತ್ರಾವತಿ ನದಿಯಲ್ಲಿ ನಾಪತ್ತೆಯಾಗಿ 2 ದಿನಗಳ ಬಳಿಕ ಶವವಾಗಿ ಪತ್ತೆಯಾದ ಕೆಫೆ ಕಾಪಿ ಡೇ ಸಂಸ್ಥಾಪಕ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಪ್ರಕರಣದ ವಿಧಿವಿಜ್ಞಾನದ ವರದಿ ಪೊಲೀಸರ ಕೈಸೇರಿದೆ. ಈ ವರದಿಯಲ್ಲಿ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿದೆ. ಆದ್ರೆ ಪೊಲೀಸರು ಪ್ರಕರಣವನ್ನು ಮತ್ತಷ್ಟು ತನಿಖೆಗೊಳಪಡಿಸಲು ಮುಂದಾಗಿದ್ದಾರೆ.
ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದುಕೊಳ್ಳಲು ಪೊಲೀಸರು 2ನೇ ಹಂತದ ತನಿಖೆಗೆ ಮುಂದಾಗಿದ್ದಾರೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಸಿದ್ಧಾರ್ಥ್ ಸಾವಿನ ರಹಸ್ಯ ಭೇದಿಸಲು ಪೊಲೀಸರು ಖಚಿತ ಸುಳಿವಿನ ಜಾಡು ಹಿಡಿಯಲಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಮಾತನಾಡಿ, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಲ್ಲಿ ಸಿದ್ಧಾರ್ಥ್ ಆತ್ಮಹತ್ಯೆಯಿಂದಾಗಿ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ ಎಂದರು.
ಆತ್ಮಹತ್ಯೆಯ ಹಿಂದಿನ ರಹಸ್ಯ ತಿಳಿಯುವ ಎರಡನೇ ಹಂತದ ತನಖೆ ನಡೆಸಲಿದ್ದೇವೆ. ಇದಕ್ಕೆ ಅಧಿಕಾರಿಗಳು ಅವರ ಕುಟುಂಬ ಸದಸ್ಯರು, ವ್ಯವಹಾರ ಪಾಲುದಾರರು, ಸಾಲಗಾರರ ವಿಚಾರಣೆ ನಡೆಸಿ ಷೇರು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನೂ ಸಹ ಸಂಗ್ರಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿದ್ಧಾರ್ಥ್ ಸಾವಿಗೂ ಮುನ್ನ ಆದಾಯ ತೆರಿಗೆ ಇಲಾಖೆಯ ನೋಟಿಸ್ ಒತ್ತಡಕ್ಕೆ ಒಳಗಾಗಿ ಪತ್ರ ಬರೆದಿದ್ದರು ಎನ್ನಲಾದ ಆಪಾದನೆ ಸಹ ತನಿಖಾ ವ್ಯಾಪ್ತಿಗೆ ಒಳಪಡಲಿದೆ. ನೋಟಿಸ್ಗಳ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎನ್ನಲಾಗುತ್ತಿದೆ.