ಬೆಂಗಳೂರು: ಕೆನರಾ ಬ್ಯಾಂಕ್ 2020-21ರ ಆರ್ಥಿಕ ವರ್ಷದಲ್ಲಿ 2,557 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 2020ರಲ್ಲಿ 5,838 ಕೋಟಿ ರೂಪಾಯಿ ಗಳಿಸಿದ್ದಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆ ಕೆನರಾ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ (ಎನ್‌ಐಐ) ವರ್ಷದಿಂದ ವರ್ಷಕ್ಕೆ ಶೇಕಡಾ 18.57ರಷ್ಟು ಏರಿಕೆ ಕಂಡು, 24,062 ಕೋಟಿ ರೂಪಾಯಿಗೆ ತಲುಪಿದೆ. ಚಾಲ್ತಿ ಮತ್ತು ಉಳಿತಾಯ ಖಾತೆ (ಸಿಎಎಸ್‌ಎ) ಠೇವಣಿ ಶೇಕಡಾ 13.95ರಷ್ಟು ಏರಿಕೆ ಕಂಡು, 3,30,656 ಕೋಟಿ ರೂಪಾಯಿಗೆೆ ತಲುಪಿದೆ.
ಚಿಲ್ಲರೆ ಸಾಲಗಳು ಮಾರ್ಚ್ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇಕಡಾ 12.14ರಷ್ಟು ಏರಿಕೆ ಕಂಡು, 1,15,312 ಕೋಟಿ ರೂಪಾಯಿ ಮುಟ್ಟಿದೆ. ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಲಾಭ 1,010 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 6,567 ಕೋಟಿ ರೂಪಾಯಿ ಆಗಿತ್ತು. ಎನ್‌ಐಐ ಶೇಕಡಾ 9.87ರಷ್ಟು ಏರಿಕೆ ಕಂಡು, 5,589 ಕೋಟಿ ರೂಪಾಯಿ ತಲುಪಿದೆ.
ಇದನ್ನೂ ಓದಿ: ರಾಜ್ಯದ ಪ್ರಮುಖ 6 ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್‌ಗೆ ಚಿಕಿತ್ಸೆ
ಆಸ್ತಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಕೆನರಾ ಬ್ಯಾಂಕಿನ ಒಟ್ಟು ನಿಷ್ಕ್ರಿಯ ಆಸ್ತಿಗಳು (ಎನ್‌ಪಿಎ) ಮಾರ್ಚ್ 31ರ ವೇಳೆಗೆ 60,288 ಕೋಟಿ ರೂಪಾಯಿಗಳಾಗಿದ್ದು ನಿವ್ವಳ ಎನ್‌ಪಿಎ 24,442 ಕೋಟಿ ರೂಪಾಯಿಗಳಷ್ಟಾಗಿದೆ. ಒಟ್ಟು ಎನ್‌ಪಿಎ 46 ಬೇಸಿಸ್ ಪಾಯಿಂಟ್‌ಗಳ ಕುಸಿತದಿಂದ ಒಟ್ಟು ಮುಂಗಡಗಳು ಶೇಕಡಾ 9.93ಕ್ಕೆ ತಲುಪಿದ್ದರೆ, ನಿವ್ವಳ ಎನ್‌ಪಿಎ 52 ಬೇಸಿಸ್ ಪಾಯಿಂಟ್‌ಗಳ ಇಳಿಕೆ ಕಂಡು ಶೇಕಡಾ 3.82ಕ್ಕೆ ತಲುಪಿದೆ.
ಕೆನರಾ ಬ್ಯಾಂಕ್ 2021ರ ಮಾರ್ಚ್ ವೇಳೆಗೆ ಆದ್ಯತಾ ವಲಯದಲ್ಲಿ ಶೇಕಡಾ 44.11ರಷ್ಟು ಮತ್ತು ಕೃಷಿ ಸಾಲ ಶೇಕಡಾ 18.56ರಷ್ಟು ನೀಡಿದ ಗುರಿ ಸಾಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕೆನರಾ ಬ್ಯಾಂಕಿನ ಷೇರುಗಳು ಮಂಗಳವಾರ ವಹಿವಾಟಿನಲ್ಲಿ ಬಿಎಸ್‌ಇಯಲ್ಲಿ ಶೇಕಡಾ 4.43ರಷ್ಟು ಇಳಿಕೆ ಕಂಡು, ಪ್ರತಿ ಷೇರಿನ ಬೆಲೆ 146.80 ರೂಪಾಯಿ ತಲುಪಿದೆ.