ನವದೆಹಲಿ : ತಮ್ಮ ಕಂಪನಿ ಮೋಸರ್ ಬೇರ್ ಸೋಲಾರ್ ಲಿಮಿಟೆಡ್‌ನ ಒಳಗೊಂಡ 787 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧ ಸಿಬಿಐ ಶುಕ್ರವಾರ ರತುಲ್ ಪುರಿ ಮತ್ತು ಇತರರ ಅಧಿಕೃತ ಮತ್ತು ವಸತಿ ಸೇರಿದಂತೆ ಏಳು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ ಆರಂಭವಾದ ಶೋಧಗಳು ಇನ್ನೂ ಮುಂದುವರೆದಿದೆ. ರತುಲ್ ಪುರಿಯ ತಂದೆ ದೀಪಕ್ ಪುರಿಯ ಅಧಿಕೃತ ವಸತಿ ಆವರಣದಲ್ಲಿಯೂ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋಸರ್ ಬೇರ್ ಸೋಲಾರ್ ಕಂಪನಿಗೆ ನೀಡಿರುವ ಸಾಲ ಸೌಲಭ್ಯಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) 787 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಬ್ಯಾಂಕ್ ಗುರುವಾರ ಕೇಂದ್ರೀಯ ತನಿಖಾ ತಂಡಕ್ಕೆ (ಸಿಬಿಐ) ದೂರು ನೀಡಿತ್ತು. ಕೋವಿಡ್-19 ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆಯ ವೇಳೆ ಅಧಿಕಾರಿಗಳ ತಂಡ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳನ್ನು ಧರಿಸಿವೆ.
ತಿಂಗಳಲ್ಲಿ ಎರಡನೇ ದಾಳಿ : ಪಿಎನ್‌ಬಿಗೆ 31 ಕೋಟಿ ರೂ. ವಂಚಿಸಿದ್ದ ಪ್ರಕರಣ ಸಂಬಂಧ ಸಿಬಿಐ, ಇದೇ ಜೂನ್ 11ರಂದು ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅಂದಿನ ಪಿಎನ್‌ಬಿಯ ಅಧಿಕಾರಿಗಳ ನಿವಾಸ ಹಾಗೂ ವಿಶಾಖಪಟ್ಟಣಂ, ಕೋಲ್ಕತಾ, ಜಮ್ಮು, ಭುವನೇಶ್ವರ ಮತ್ತು ಕಟಕ್‌ನ ಖಾಸಗಿ ವ್ಯಕ್ತಿಗಳಿಗೆ ಸೇರಿದ ವಸತಿ ಮತ್ತು ಕಚೇರಿಗಳಲ್ಲಿ ಏಜೆನ್ಸಿ ಅಧಿಕಾರಿಗಳು ಶೋಧ ನಡೆಸಿದ್ದರು.
ಶೋಧದ ವೇಳೆ ದೋಷಾರೋಪಣೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಲಾಕರ್ ಕೀಗಳು ಪತ್ತೆಯಾಗಿದ್ದವು. ಅಂದಿನ ಮುಖ್ಯ ವ್ಯವಸ್ಥಾಪಕರಾಗಿದ್ದ ನಾಗಮಣಿ ಸತ್ಯನಾರಾಯಣ ಪ್ರಸಾದ್ ಅವರ ಸಂಸ್ಥೆಯಲ್ಲಿ ಶೋಧ ಕಾರ್ಯ ನಡೆದಿದೆ. ಆಗಿನ ಸಹಾಯಕ ಜನರಲ್ ಮ್ಯಾನೇಜರ್ ಎಸ್ ಸಿ ಶರ್ಮಾ, ಅಂದಿನ ಮುಖ್ಯ ವ್ಯವಸ್ಥಾಪಕ ಮನೋರಂಜನ್ ಡ್ಯಾಶ್, ಭುವನೇಶ್ವರ ಪಿಎನ್‌ಬಿ ಸ್ಟೇಷನ್ ವೃತ್ತ ಶಾಖೆಯ ಅಂದಿನ ಹಿರಿಯ ವ್ಯವಸ್ಥಾಪಕ ಪ್ರಿಯೋಟೋಶ್ ದಾಸ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು. ಈ ಪ್ರಕರಣ ಮರೆಯುವ ಮುನ್ನವೇ ಇದೇ ಬ್ಯಾಂಕ್ನ ಮತ್ತೊಂದು ಪ್ರಕರಣಕ್ಕೆ ಸಂಬಂಧ ದಾಳಿ ನಡೆದಿದೆ.