ಮುಂಬೈ: ಸುದ್ದಿ ಪರವಾಗಿ ರೇಟಿಂಗ್‌ಗಳನ್ನು ತಿರುಚಿದ್ದಕ್ಕೆ ಪ್ರತಿಯಾಗಿ ರಿಪಬ್ಲಿಕ್ ಟಿವಿ ಚಾನಲ್ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಂದ 12,000 ಡಾಲರ್ (8,75,286 ರೂ.) ಪಡೆದಿರುವುದಾಗಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಮುಂಬೈ ಪೊಲೀಸರಿಗೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಾನಲ್ ರೇಟಿಂಗ್‌ಗಳನ್ನು ತಿದ್ದಿದ ಆರೋಪದ ಮೇಲೆ ಮುಂಬೈ ಪೊಲೀಸರು ಸೋಮವಾರ 3600 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ಬಾರ್ಕ್‌ನ ಮಾಜಿ ಸಿಇಒ ರೊಮಿಲ್ ರಾಮ್‌ಗರ್ಹಿಯಾ ಮತ್ತು ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಸಿಇಒ ವಿಕಾಸ್ ಖಂಚಂದಾನಿ ವಿರುದ್ಧ ಸಲ್ಲಿಸಿದ್ದಾರೆ. 12 ಜನರ ವಿರುದ್ಧ 2020ರ ನವೆಂಬರ್‌ನಲ್ಲಿ ಮೊದಲ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.
ಚಾರ್ಜ್‌ಶೀಟ್‌ನಲ್ಲಿ ರಿಪಬ್ಲಿಕ್ ನ್ಯೂಸ್ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ವಿದೇಶ ಪ್ರವಾಸಕ್ಕಾಗಿ ದಾಸ್‌ಗುಪ್ತಾ ಅವರಿಗೆ 12,000 ಡಾಲರ್ ಪಾವತಿಸಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ರಿಪಬ್ಲಿಕ್ ಟಿವಿಯ ಪರವಾಗಿ ರೇಟಿಂಗ್ ನಿರ್ವಹಿಸಿದ್ದಕ್ಕಾಗಿ ಪಾರ್ಥೋ ದಾಸ್‌ಗುಪ್ತಾ ಅವರಿಗೆ 40 ಲಕ್ಷ ರೂ. ನೀಡಲಾಗಿದೆ ಎಂಬುದು ಸಹ ದಾಖಲಾಗಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: GST ನಷ್ಟ ಪರಿಹಾರ: 13ನೇ ಕಂತಿನಡಿ 6,000 ಕೋಟಿ ರೂ. ಸಾಲ ಎತ್ತಿ ರಾಜ್ಯಗಳಿಗೆ ಬಿಡುಗಡೆ
ದಾಸ್‌ಗುಪ್ತಾ ಅವರು ತಮ್ಮ ಕೈಬರಹದ ಹೇಳಿಕೆಯಲ್ಲಿ 2003ರಿಂದ ಅರ್ನಾಬ್ ಗೋಸ್ವಾಮಿ ಪರಿಚಯವಿದೆ. ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು. ಟೈಮ್ಸ್ ನೌನಲ್ಲಿ ಒಟ್ಟಿಗೆ ಕೆಲಸ ಮಾಡುವಾಗಲೂ ಸಂಪರ್ಕದಲ್ಲಿದ್ದರು. ದಾಸ್‌ಗುಪ್ತಾ ಅವರು 2013ರಲ್ಲಿ ಬಾರ್ಕ್‌ಗೆ ಸಿಇಒ ಆಗಿ ಸೇರಿಕೊಂಡರು. ಅರ್ನಾಬ್ ಗೋಸ್ವಾಮಿ ಅವರು 2017ರಲ್ಲಿ ರಿಪಬ್ಲಿಕ್ ಟಿವಿ ಪ್ರಾರಂಭಿಸಿದ್ದರು.
ರಿಪಬ್ಲಿಕ್ ಟಿವಿ ಪ್ರಾರಂಭಿಸುವ ಮೊದಲೇ ಅರ್ನಾಬ್ ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಅವರ ಚಾನಲ್‌ಗೆ ಉತ್ತಮ ರೇಟಿಂಗ್ಗೆ ನೆರವಾಗುವಂತೆ ಪರೋಕ್ಷವಾಗಿ ಸುಳಿವು ನೀಡುತ್ತಿದ್ದರು. ಟಿಆರ್‌ಪಿ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಗೋಸ್ವಾಮಿಗೆ ಚೆನ್ನಾಗಿ ತಿಳಿದಿತ್ತು. ಭವಿಷ್ಯದಲ್ಲಿ ಅವರಿಗೆ ಸಹಾಯ ಮಾಡಲು ಅವರು ಪ್ರಸ್ತಾಪಿಸಿದ್ದರು ಎಂದು ದಾಸ್‌ಗುಪ್ತಾ ತಮ್ಮ ಕೈಬರಹದ ಹೇಳಿಕೆಯಲ್ಲಿ ತಿಳಿಸಿದ್ದಾರೆ.