ನವದೆಹಲಿ: ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಅವರು ಮುಂದಿನ ವಾರ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಉನ್ನತಾಧಿಕಾರಿಗಳು ಹಾಗೂ ಉದ್ಯಮದ ಮುಖಂಡರುಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭಾರತ ಪ್ರವಾಸದಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಕೇಂದ್ರೀಕರಿಸಿಕೊಂಡು ಉದ್ಯಮಿಗಳನ್ನು ಭೇಟಿ ಮಾಡಿಲಿದ್ದಾರೆ. ಜನವರಿ 15 ಅಥವಾ 16ರಂದು ದೆಹಲಿಗೆ ಬಂದು ಇಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸಂಪರ್ಕಿಸಿದಾಗ, ಅಮೆಜಾನ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಅಮೆಜಾನ್, ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಅಮೆಜಾನ್ ಮತ್ತು ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ ಸೇರಿದಂತೆ ಇತರೆ ಇ-ಕಾಮರ್ಸ್ ದೈತ್ಯರು ದೊಡ್ಡ ಮಟ್ಟದ ರಿಯಾಯಿತಿ ನೀಡಿ ಸ್ಪರ್ಧಾತ್ಮಕ ವಹಿವಾಟಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪವಿದೆ. ಇದರ ವಿರುದ್ಧ ದೇಶಿಯ ವರ್ತಕರು ಈಗಾಗಲೇ ಪ್ರತಿಭಟನೆಗಳನ್ನು ಸಹ ನಡೆಸಿದ್ದಾರೆ.
ಪ್ರವಾಸದ ವೇಳೆ ಬೆಜೊಸ್ ಅವರು ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಕೆಲವು ನಿಯಂತ್ರಕ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಎಸ್‌ಎಂಭವ್ ಸಮಾವೇಶದಲ್ಲಿ ಎಸ್‌ಎಂಬಿಗಳೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ. ತಂತ್ರಜ್ಞಾನದ ಅಳವಡಿಕೆಯು ಭಾರತದಲ್ಲಿ ಎಸ್‌ಎಂಬಿಗಳನ್ನು ಹೇಗೆ ಶಕ್ತಗೊಳಿಸುತ್ತದೆ ಎಂಬುದರ ಕುರಿತು ಚರ್ಚೆ ನಡೆಯಲಿವೆ.