ನವದೆಹಲಿ: ಸರ್ಕಾರಕ್ಕೆ ಸಲ್ಲಿಸಬೇಕಿರುವ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಸಂಬಂಧಿತ ಬಾಕಿ ಪಾವತಿಸುವ ಸಂಸ್ಥೆಗಳ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ಕಳೆದ 10 ವರ್ಷಗಳ ಹಣಕಾಸು ಸ್ಟೇಟ್ಮೆಂಟ್ ಮತ್ತು ಖಾತೆಗಳ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಟೆಲಿಕಾಂ ಕಂಪನಿಗಳಿಗೆ ಗುರುವಾರ ಸೂಚಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಟೆಲಿಕಾಂ ಕಂಪನಿಗಳಿಗೆ ಭದ್ರತೆಯ ಬಗ್ಗೆ ವಿವರಗಳನ್ನು ನೀಡುವಂತೆ ಕೇಳಿದೆ. ಈ ಪ್ರಕರಣದ ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮುಂದೂಡಲಾಗಿದೆ.
ವೊಡಾಫೋನ್ ಐಡಿಯಾ, ಟಾಟಾ ಟೆಲಿ ಸರ್ವಿಸ್, ಭಾರ್ತಿ ಏರ್‌ಟೆಲ್ ಸೇರಿದಂತೆ ಟೆಲಿಕಾಂ ಕಂಪನಿಗಳ ಎಜಿಆರ್ ಸಂಬಂಧಿತ ಬಾಕಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮೊಬೈಲ್ ಆಪರೇಟರ್‌ಗಳು ಗಳಿಸಿದ ಆದಾಯ ಮತ್ತು ಕಳೆದ 10 ವರ್ಷಗಳಲ್ಲಿ ಪಾವತಿಸಿದ ತೆರಿಗೆಗಳ ವಿವರಗಳನ್ನು ನೀಡುವಂತೆ ನಿರ್ದೇಶಿಸಿತು.
ಅಕ್ಟೋಬರ್ 24ರಂದು ಸುಪ್ರೀಂ ಕೋರ್ಟ್ ದೂರಸಂಪರ್ಕ ಇಲಾಖೆಯ (ಡಿಒಟಿ) ವ್ಯಾಖ್ಯಾನವನ್ನು ಎತ್ತಿಹಿಡಿದು, ಟೆಲಿಕಾಂ ಸಂಸ್ಥೆಗಳಿಗೆ ಆ ವ್ಯಾಖ್ಯಾನ ಆಧರಿಸಿ ಸುಂಕ ಪಾವತಿಸಲು ಆದೇಶಿಸಿತ್ತು. ಮೊತ್ತ ಮತ್ತು ದಂಡದ ಮೇಲಿನ ಬಡ್ಡಿ ಸಹ ನೀಡುವಂತೆ ತಾಕೀತು ಮಾಡಿತ್ತು.