ಮುಂಬೈ: ಅಬುಧಾಬಿ ಮೂಲದ ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿಯು (ಮುಬಡಾಲಾ) ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 9,093.60 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. 4.91 ಲಕ್ಷ ಕೋಟಿ ರೂ. ಷೇರು ಮೌಲ್ಯದ ಈಕ್ವಿಟಿ ಹಾಗೂ 5.16 ಲಕ್ಷ ಕೋಟಿ ರೂ. ಮೌಲ್ಯದಷ್ಟು ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಿಳಿಸಿದೆ.
ಈ ಹೂಡಿಕೆಯೊಂದಿಗೆ ಜಿಯೋ ಪ್ಲಾಟ್ಫಾರ್ಮ್ಗೆ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ಟಾ ಇಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್ ಮತ್ತು ಮುಬಡಾಲಾಗಳಿಂದ ಆರು ವಾರಗಳಲ್ಲಿ 87,655.35 ಕೋಟಿ ರೂ. ಹೂಡಿಕೆ ಹರಿದು ಬಂದಂತಾಗಲಿದೆ.
ಅಬುಧಾಬಿಯೊಂದಿಗಿನ ನನ್ನ ದೀರ್ಘ ಕಾಲದ ಸಂಬಂಧದ ಮೂಲಕ ಯುಎಇಯ ಜ್ಞಾನ ಆಧಾರಿತ ಆರ್ಥಿಕತೆ ಮತ್ತು ಜಾಗತಿಕವಾಗಿ ಸಂಪರ್ಕಿಸುವಲ್ಲಿ ಮುಬಡಾಲಾ ಅವರ ಕೆಲಸದ ಪ್ರಭಾವವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಮುಬಡಾಲಾ ಅವರ ಅನುಭವ ಮತ್ತು ವಿಶ್ವದಾದ್ಯಂತ ಅವರ ಬೆಳವಣಿಗೆಯನ್ನು ನಾವೂ ಪಡೆಯುತ್ತೇವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.
ಸಣ್ಣ ವ್ಯಾಪಾರಿಗಳು, ಸೂಕ್ಷ್ಮ ಉದ್ಯಮಗಳು ಮತ್ತು ರೈತರು ಸೇರಿದಂತೆ ದೇಶಾದ್ಯಂತ 1.3 ಬಿಲಿಯನ್ ಜನರು ಮತ್ತು ವ್ಯವಹಾರಗಳಿಗೆ ಡಿಜಿಟಲ್ ಇಂಡಿಯಾ ಅಭಿಯಾನ ಸಕ್ರಿಯಗೊಳಿಸುವುದು ಜಿಯೋ ಉದ್ದೇಶವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.