ಬೆಂಗಳೂರು: ದೇಶದ ಪ್ರಮುಖ ಏಳು ವಾಣಿಜ್ಯ ಬ್ಯಾಂಕ್ಗಳ ಸ್ಥಾಪನೆಯ ಮೂಲಕ ’ಕರ್ನಾಟಕ ಬ್ಯಾಂಕ್ಗಳ ತೊಟ್ಟಿಲು’ ಎಂಬ ಕೀರ್ತಿ ಹೊಂದಿತ್ತು. ಒಂದಾದರ ಮೇಲೊಂದರಂತೆ ಬ್ಯಾಂಕ್ಗಳ ವಿಲೀನದಿಂದ ನಿಧಾನಕ್ಕೆ ಈ ಪಟ್ಟ ಕಳಚಿದೆ.
ಮೈಸೂರು ಒಡೆಯರ ಆಡಳಿದ ಅವಧಿಯ 1903ರಲ್ಲಿ ಅಂದಿನ ಧಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ದಿ ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್ ಅನ್ನು ಪ್ರಪ್ರಥಮ ಬಾರಿಗೆ ಸ್ಥಾಪಿಸಿದ್ದರು. ಮುಂದೆ ಅದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಯಿತು. ಎನ್ಡಿಎ-1 ಆಡಳಿತದ 2016ರಲ್ಲಿ ಮೊದಲ ಸುತ್ತಿನ ಬ್ಯಾಂಕ್ಗಳ ವೀಲಿನ ಪ್ರಕ್ರಿಯೆಯಿಂದು ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಡಲು ಸೇರಿತು.
1931ರಲ್ಲಿ ಕರಾವಳಿ ಭಾಗದ ಮಂಗಳೂರಿನಲ್ಲಿ ಆರಂಭ ಆಗಿದ್ದ ವಿಜಯಾ ಬ್ಯಾಂಕ್ ಕಳೆದ ವರ್ಷ ಬ್ಯಾಂಕ್ ಆಫ್ ಬರೋಡ ಜೊತೆಗೆ ವಿಲೀನಗೊಂಡಿತ್ತು. 1925ರಲ್ಲಿ ಮಣಿಪಾಲದಲ್ಲಿ ಜನ್ಮತಳೆದಿದ್ದ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ಜೊತೆಗೆ ವಿಲೀನವಾಗುತ್ತಿದ್ದರೇ 1906ರಲ್ಲಿ ಉಡುಪಿಯಲ್ಲಿ ಶುರುವಾದ ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳ್ಳುತ್ತಿದೆ.
ಬೆಂಗಳೂರಿನಲ್ಲಿ 1930ರಲ್ಲಿ ಆರಂಭವಾಗಿದ್ದ ವೈಶ್ಯ ಬ್ಯಾಂಕ್ ಲಿಮಿಟೆಡ್ 2002ರಲ್ಲಿ ಐಎನ್ಜಿ ವೈಶ್ಯ ಬ್ಯಾಂಕ್ ಆಗಿ ಹೆಸರು ಬದಲಾಯಿಸಿಕೊಂಡಿತ್ತು. 2015ರಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಜೊತೆ ವಿಲೀನವಾಯಿತು. ಕರ್ನಾಟಕ ಮೂಲದ ಸರ್ಕಾರಿ ವಲಯದ ಕೆನರಾ ಬ್ಯಾಂಕ್ ಮತ್ತು ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಮಾತ್ರ ಅಸ್ತಿತ್ವದಲ್ಲಿ ಉಳಿಯಲಿವೆ. ಉಳಿದ ಬ್ಯಾಂಕ್ಗಳು ಇತಿಹಾಸ ಪುಟ ಸೇರಿದವು. ಹಲವು ದಶಕಗಳಿಂದ ಕನ್ನಡದ ಅಸ್ಮಿತೆ ಹೊಂದಿದ್ದ ಬ್ಯಾಂಕ್ಗಳು ಅನ್ಯ ರಾಜ್ಯದ ಬ್ಯಾಂಕ್ಗಳ ಹೆಸರಿನೊಂದಿಗೆ ಇನ್ಮುಂದೆ ವಹಿವಾಟು ನಡೆಸಲಿವೆ.