ಪೆನ್ಸಿಲ್ವೇನಿಯಾ: ಭಾರತ ಮತ್ತು ಚೀನಾ ಇನ್ನು ಮುಂದೆ 'ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು' ಅಲ್ಲ. ಡಬ್ಲ್ಯುಟಿಒನ ಲಾಭ ಪಡೆದುಕೊಳ್ಳಲು ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಅಮೆರಿಕಾ ಫಸ್ಟ್' ಎಂಬ ಮಾತುಗಳನ್ನು ಆಗಾಗ ಉದುರಿಸುತ್ತಲೇ ಅಮೆರಿಕ ಸರಕುಗಳ ಮೇಲೆ ಭಾರತ ವಿಧಿಸುತ್ತಿರುವ ಹೆಚ್ಚಿನ ಸುಂಕವನ್ನು ಖಂಡಿಸಿ 'ಇಂಡಿಯಾ ಟ್ಯಾಕ್ಸ್ ಕಿಂಗ್' ಎಂದು ಅಣಕಿಸುತ್ತಾ ಬರುತ್ತಿದ್ದಾರೆ. ಮಂಗಳವಾರ ಪೆನ್ಸಿಲ್ವೇನಿಯಾದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತ ಮತ್ತು ಚೀನಾ ವಿರುದ್ಧ ಕಿಡಿಕಾರಿದ್ದಾರೆ.
ಜುಲೈನಲ್ಲಿ ವಿಶ್ವ ವಾಣಿಜ್ಯ ಒಕ್ಕೂಟಕ್ಕೆ (ಡಬ್ಲ್ಯೂಟಿಒ) ಅಭಿವೃದ್ಧಿಶೀಲ ರಾಷ್ಟ್ರಗಳ ಮಾಪನದ ಮಾನದಂಡದ ವ್ಯಾಖ್ಯಾನ ಗೊತ್ತುಪಡಿಸುವಂತೆ ಕೇಳಿದ ಅವರು, ಜಾಗತಿಕ ವ್ಯಾಪಾರ ನಿಯಮದಡಿ ಫಲ ಪಡೆಯುತ್ತಿರುವ ಚೀನಾ, ಟರ್ಕಿ ಮತ್ತು ಭಾರತದಂತಹ ದೇಶಗಳನ್ನು ಪ್ರತ್ಯೇಕಿಸಬೇಕು ಎಂದು ಹೇಳಿದ್ದರು. ಈಗ ಅದರ ಲಾಭ ಪಡೆಯಲು ಅನುವು ಮಾಡಿಕೊಡುವುದಿಲ್ಲ ಎಂದಿದ್ದಾರೆ.
ಆ ರಾಷ್ಟ್ರಗಳು ಡಬ್ಲ್ಯುಟಿಒನಿಂದ ಪಡೆಯುತ್ತಿರುವ ಅನುಕೂಲಗಳು ಅಮೆರಿಕಕ್ಕೆ ಅನಾನುಕೂಲವಾಗಿ ಪರಿಣಮಿಸಿವೆ. ವರ್ಷದಿಂದ ವರ್ಷಕ್ಕೆ ಅವರು (ಭಾರತ ಮತ್ತು ಚೀನಾ) ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ನಮಗೆ ಮಾತ್ರ ನಷ್ಟವಾಗುತ್ತಿದೆ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಮತ್ತು ಚೀನಾ ಏಷ್ಯಾದ ಆರ್ಥಿಕ ದೈತ್ಯ ರಾಷ್ಟ್ರಗಳು. ಇನ್ನು ಮುಂದೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲ. ಡಬ್ಲ್ಯುಟಿಒದಿಂದ ಲಾಭ ಪಡೆಯಲು ಬಿಡುವುದಿಲ್ಲ ಎಂದು ಹೇಳಿದರು.