ದೆಹಲಿ: ಜಾಗತಿಕ ಮಾಹಿತಿ ತಂತ್ರಜ್ಞಾನ, ಸಲಹಾ ಮತ್ತು ವ್ಯವಹಾರ ಪ್ರಕ್ರಿಯೆ ಸೇವೆಗಳ ಪ್ರಮುಖ ಕಂಪನಿಯಾದ ವಿಪ್ರೋದ ಸಿಇಒ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಮತ್ತು (ವ್ಯವಸ್ಥಾಪಕ ನಿರ್ದೇಶಕ) ಎಂಡಿ ಅಬಿದಾಲಿ ಝಡ್ ನೀಮುಚ್ವಾಲಾ ಅವರು ಕೌಟುಂಬಿಕ ಕಾರಣದ ಹಿನ್ನೆಲೆ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈಗಾಗಲೇ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಸಿಇಒ) ಗುರುತಿಸಲು ನಿರ್ದೇಶಕರ ಮಂಡಳಿ ಶೋಧಕಾರ್ಯ ಪ್ರಾರಂಭಿಸಿದೆ. ಮುಂದಿನ ಉತ್ತರಾಧಿಕಾರಿ ನೇಮಿಸುವವರೆಗೂ ಅಬಿದಾಲಿ ಝಡ್ ನೀಮುಚ್ವಾಲಾ ಅವರು ಸಿಇಒ ಆಗಿ ಕಾರ್ಯ ನಿರ್ವಾಹಿಸುತ್ತಾರೆ ಎಂದು ತಿಳಿಸಲಾಗಿದೆ.
ಇನ್ನು ಈ ಕುರಿತು ವಿಪ್ರೋದ ಅಧ್ಯಕ್ಷ ಅಜಿಮ್ ಪ್ರೇಮ್‍ಜಿ ಪ್ರತಿಕ್ರಿಯೆ ನೀಡಿದ್ದು, ಅಬಿದಾಲಿ ಝಡ್ ನೀಮುಚ್ವಾಲಾ ಅವರ ನಾಯಕತ್ವ ಮತ್ತು ವಿಪ್ರೋಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಧನ್ಯವಾದ ತಿಳಿಸಿದರು. ಇವರ ಸಹಕಾರದಿಂದ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.